Deodhar Trophy: ಕನ್ನಡಿಗರ ಭರ್ಜರಿ ಆಟ ದಕ್ಷಿಣ ವಲಯಕ್ಕೆ 5 ವಿಕೆಟ್ ಜಯ
ದೇಶೀಯ ಕ್ರಿಕೆಟ್‌ನಲ್ಲಿ ಕನ್ನಡಿಗರ ಅದ್ಭುತ ಪ್ರದರ್ಶನ ಮುಂದುವರೆದಿದೆ, ಭಾನುವಾರ ನಡೆದ ದೇವಧರ್ ಟ್ರೋಫಿ ಪಂದ್ಯದಲ್ಲಿ ದಕ್ಷಿಣ ವಲಯ ಪೂರ್ವ ವಲಯದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಸಿದೆ. ಮಯಾಂಕ್ ಅಗರ್ವಾಲ್ ಸೇರಿದಂತೆ ಕನ್ನಡಿಗ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು.
ಪುದುಚೆರ್‍ರಿ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬೌಲಿಂಗ್ ಮಾಡಿದ ದಕ್ಷಿಣ ವಲಯ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು.

ಆರಂಭದಲ್ಲೇ ಅಭಿಮನ್ಯು ಈಶ್ವರನ್ (12) ವಿಕೆಟ್ ಪಡೆಯುವ ಮೂಲಕ ದಕ್ಷಿಣ ವಲಯ ಉತ್ತಮ ಆರಂಭ ಪಡೆಯಿತು. ವಿರಾಟ್ ಸಿಂಗ್ ಮತ್ತು ಸುಭ್ರಾಂಶು ಸೇನಾಪತಿ 2ನೇ ವಿಕೆಟ್‌ಗೆ 96 ರನ್‌ಗಳನ್ನು ಕಲೆಹಾಕುವ ಮೂಲಕ ಉತ್ತಮ ಮೊತ್ತ ದಾಖಲಿಸುವ ಸೂಚನೆ ನೀಡಿದರು.
ಆದರೆ ಎರಡನೇ ವಿಕೆಟ್ ಪತನದ ನಂತರ ಪೂರ್ವ ವಲಯ ವಿಕೆಟ್‌ಗಳನ್ನು ಕಳೆದುಕೊಂಡಿತು. ಯಾವುದೇ ದೊಡ್ಡ ಮೊತ್ತದ ಜೊತೆಯಾಟ ಕೂಡ ಬರಲಿಲ್ಲ. 108 ರನ್ ಗಳಿಸಿದ್ದಾಗ 2ನೇ ವಿಕೆಟ್ ಕಳೆದುಕೊಂಡು ಪೂರ್ವ ವಲಯ, 143 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕೊನೆಯಲ್ಲಿ ಆಕಾಶ್ ದೀಪ್ 26 ಎಸೆತಗಳಲ್ಲಿ 44 ರನ್ ಗಳಿಸಿದರೆ, ಮುಖ್ತರ್ ಹುಸೈನ್ 22 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಪೂರ್ವ ವಲಯ ಅಂತಿಮವಾಗಿ 46 ಓವರ್ ಗಳಲ್ಲಿ 229 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಮಿಂಚಿದ ಕರ್ನಾಟಕ ಬೌಲರ್ ಗಳು
ದೇವಧರ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಆಟಗಾರರು ಈ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. ವಿ ಕೌಶಿಕ್ 3 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ 2 ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಕೂಡ 1 ವಿಕೆಟ್ ಪಡೆದರು. ಉಳಿದಂತೆ ಸಾಯಿ ಕಿಶೋರ್ 3 ವಿಕೆಟ್, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಮಯಾಂಕ್ ಅಗರ್ವಾಲ್ ನಾಯಕನ ಆಟ
230 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ವಲಯ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಆಸರೆಯಾದರು. ಆರಂಭಿಕ ಆಟಗಾರ ರೋಹನ್ ಕುಣ್ಣುಮ್ಮಲ್ 18 ರನ್ ಗಳಿಸಿ ಔಟಾದರು. ಮಯಾಂಕ್ ಅಗರ್ವಾಲ್ ಮತ್ತು ಸಾಯಿ ಸುದರ್ಶನ್ 2ನೇ ವಿಕೆಟ್‌ಗೆ 118 ರನ್ ಕಲೆಹಾಕುವ ಮೂಲಕ ದಕ್ಷಿಣ ವಲಯದ ಗೆಲುವು ಸುಲಭವಾಗಿಸಿದರು.
ಮಯಾಂಕ್ ಅಗರ್ವಾಲ್ 88 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 84 ರನ್ ಗಳಿಸಿದರೆ, ಸಾಯಿ ಸುದರ್ಶನ್ 67 ಎಸೆತಗಳಲ್ಲಿ 53 ರನ್ ಗಳಿಸಿದರು. ಎನ್ ಜಗದೀಶನ್ 32, ರೋಹಿತ್ ರಾಯುಡು ಅಜೇಯ 24 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ ಅಜೇಯ 8 ರನ್ ಗಳಿಸುವ ಮೂಲಕ ದಕ್ಷಿಣ ವಲಯವನ್ನು ಗೆಲುವಿನ ದಡ ಮುಟ್ಟಿಸಿದರು.












Click it and Unblock the Notifications