Rishabh Pant: ಮುಂದಿನ ಐಪಿಎಲ್‌ನಲ್ಲೂ ಆಡಲ್ವಾ ರಿಷಬ್ ಪಂತ್? ಡೆಲ್ಲಿ ಕ್ಯಾಪಿಟಲ್ಸ್ ಆತಂಕ!
2022ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ನಿರೀಕ್ಷೆಗಿಂತ ವೇಗವಾಗಿ ಅವರು ಗುಣಮುಖರಾಗುತ್ತಿದ್ದು, ಆದಷ್ಟು ಬೇಗೆ ಕ್ರಿಕೆಟ್ ಮೈದಾನಕ್ಕೆ ಹಿಂದಿರುಗಲು ಕಾಯುತ್ತಿದ್ದಾರೆ.
ಗಾಯದ ಕಾರಣ ಪ್ರಮುಖ ಪಂದ್ಯಾವಳಿಗಳನ್ನು ಅವರು ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ, ಇಂಡಿಯನ್ ಪ್ರೀಮಿಯರ್ ಲೀಗ್ 2023, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವರು ಕಳೆದುಕೊಂಡ ಪ್ರಮುಖ ಪಂದ್ಯಗಳಾಗಿವೆ.

ರಿಷಬ್ ಪಂತ್ ಮತ್ತೆ ಯಾವಾಗ ಮೈದಾನಕ್ಕೆ ಇಳಿಯುತ್ತಾರೆ ಎನ್ನುವ ಬಗ್ಗೆ ಸದ್ಯ ಸ್ಪಷ್ಟ ಮಾಹಿತಿ ಇಲ್ಲ. ಈ ವರ್ಷದ ಅಂತ್ಯಕ್ಕೆ ಅವರು ಫಿಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೂ, ರಿಷಬ್ ಪಂತ್ ವಿಚಾರದಲ್ಲಿ ಯಾವುದೇ ಅವಸರದ ತೀರ್ಮಾನ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ. ತಡವಾದರೂ ಪರವಾಗಿಲ್ಲ, ಸಂಪೂರ್ಣವಾಗಿ ಫಿಟ್ ಆದಾಗ ಮಾತ್ರವೇ ಕ್ರಿಕೆಟ್ ಆಡಲು ಅನುಮತಿ ನೀಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆತಂಕ
ರಿಷಬ್ ಪಂತ್ ಮುಂದಿನ ಐಪಿಎಲ್‌ನಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆ ಸದ್ಯ ಮೂಡುತ್ತಿದೆ. 2023ರ ಐಪಿಎಲ್‌ನಲ್ಲಿ ರಿಷಬ್ ಪಂತ್ ಅನುಪಸ್ಥಿತಿ ತಂಡವನ್ನು ಕಾಡಿತ್ತು, ಕ್ವಾಲಿಫೈಯರ್ ಹಂತಕ್ಕೂ ತಲುಪದೇ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಬೇಕಾಯಿತು.
ವಿಕೆಟ್ ಕೀಪರ್ ವಿಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭಾರಿ ಸಮಸ್ಯೆ ಅನುಭವಿಸಿತು, ಸರ್ಫರಾಜ್ ಖಾನ್, ಫಿಲ್ ಸಾಲ್ಟ್, ಅಭಿಷೇಕ್ ಪೊರೆಲ್ ಅವರು ಕೀಪಿಂಗ್ ಮಾಡಿದರೂ, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮುಂದಿನ ಐಪಿಎಲ್‌ನಲ್ಲಿ ರಿಷಬ್ ಪಂತ್ ಆಡಿದರೂ ಅವರು ವಿಕೆಟ್ ಕೀಪಿಂಗ್ ಮಾಡುವುದು ಕಷ್ಟ ಎನ್ನಲಾಗುತ್ತಿದ್ದು, ತಂಡಕ್ಕೆ ಮತ್ತೆ ತಲೆನೋವು ಶುರುವಾಗಿದೆ.

"ರಿಷಭ್ ಅವರ ಪ್ರಗತಿ ಗಮನಾರ್ಹವಾಗಿದೆ. ಈ ಹಂತದಲ್ಲಿ ಅವರು ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆ ಎಂದು ಹೇಳುವುದು ತುಂಬಾ ಕಷ್ಟ. ಅಭ್ಯಾಸ ಪ್ರಾರಂಭಿಸಿದ ನಂತರ ಕನಿಷ್ಠ ಮೂರು ತಿಂಗಳ ಸಮಯ ಬೇಕಾಗಬಹುದು ಅಥವಾ 6 ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು. ರಿಷಬ್ ಪಂತ್ ಇನ್ನೂ ಯುವಕನಾಗಿದ್ದು, ಅವರು ಸಾಕಷ್ಟು ವರ್ಷಗಳ ಕ್ರಿಕೆಟ್ ಆಡುವುದು ಬಾಕಿಯಿದ್ದು, ಅವರು ಕ್ರಿಕೆಟ್‌ಗೆ ಮರಳಲು ಅವಸರಪಡುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್‌ಸೈಡ್‌ಸ್ಪೋರ್ಟ್ ವರದಿ ಮಾಡಿದೆ.
ತಂಡದಲ್ಲಿ ಬದಲಾವಣೆ?
ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಅಷ್ಟರಲ್ಲಿ ರಿಷಬ್ ಪಂತ್ ವಾಪಸಾತಿ ಬಗ್ಗೆ ಸ್ಪಷ್ಟನೆ ಸಿಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ನಡೆಯನ್ನು ನಂತರ ತೀರ್ಮಾನಿಸಲಿದೆ. ಪಂತ್ ವಿಕೆಟ್ ಕೀಪಿಂಗ್ ಮಾಡುವುದು ಅನುಮಾನವಾದರೆ ಬದಲೀ ವಿಕೆಟ್ ಕೀಪರ್ ಬ್ಯಾಟರ್ ನನ್ನು ಹರಾಜಿನಲ್ಲಿ ಖರೀದಿಸಲಿದೆ. ಈ ಬಾರಿಯ ಕಳಪೆ ಪ್ರದರ್ಶನದ ಕಾರಣ ತಂಡದ ತರಬೇತಿ ವಿಭಾಗದಲ್ಲಿ ಬದಲಾವಣೆ ಮಾಡಲಾಗಿದೆ. ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಮುಂದುವರೆಯಲಿದ್ದು, ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರು ತಂಡದಿಂದ ಹೊರಬಿದ್ದಿದ್ದಾರೆ.












Click it and Unblock the Notifications