DC vs SRH: ಮಿಚೆಲ್ ಸ್ಟಾರ್ಕ್, ಫಾಫ್ ಅಬ್ಬರಕ್ಕೆ ಸನ್‌ರೈಸರ್ಸ್ ಹೈದರಬಾದ್ ಧೂಳಿಪಟ!
ವಿಶಾಖಪಟ್ಟಣದ ಡಾ. ವೈ. ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ. ಬಲಿಷ್ಠ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ಮಾರಕ ಬೌಲಿಂಗ್ ದಾಳಿಗೆ ಮಂಡಿಯೂರಿತು.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ನ ಮಿಚೆಲ್ ಸ್ಟಾರ್ಕ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಆರಂಭದಲ್ಲೇ ಆಘಾತದ ಮೇಲೆ ಆಘಾತ ನೀಡಿದರು. ಅಭಿಷೇಕ್ ಶರ್ಮಾ 1 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾದ ಬಳಿಕ ಎಸ್‌ಆರ್ ಎಚ್ ತಂಡದ ಕುಸಿತ ಆರಂಭವಾಯಿತು.

ಇಶಾನ್ ಕಿಶನ್ 2 ರನ್ ಗಳಿಸಿದ್ದಾಗ ಔಟಾದರೆ, ನಿತೀಶ್ ರೆಡ್ಡಿ ರನ್ ಗಳಿಸುವ ಮುನ್ನವೇ ಔಟಾದರು. ಟ್ರಾವಿಸ್ ಹೆಡ್ 22 ರನ್ ಗಳಿಸಿ ಔಟಾದರು. ಆರಂಭದಲ್ಲಿ ಈ ಮೂವರ ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭದಲ್ಲೇ ಮೇಲುಗೈ ತಂದುಕೊಟ್ಟರು. 37 ರನ್‌ಗಳಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಎಸ್‌ಆರ್ ಎಚ್ ಸಂಕಷ್ಟಕ್ಕೆ ಸಿಲುಕಿತು.
ಅನಿಕೇತ್ ವರ್ಮಾ 41 ಎಸೆತಗಳಲ್ಲಿ 5 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 74 ರನ್ ಗಳಿಸುವ ಮೂಲಕ ಮಿಂಚಿದರು. ಹೆನ್ರಿಚ್ ಕ್ಲಾಸೆನ್ 19 ಎಸೆತಗಳಲ್ಲಿ 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಇವರಿಬ್ಬರೂ ಔಟಾಗುತ್ತಿದ್ದಂತೆ ಎಸ್‌ಆರ್ ಎಚ್ ಬೇಗ ಬೇಗನೆ ವಿಕೆಟ್ ಕಳೆದುಕೊಂಡಿತು. 18.4 ಓವರ್ ಗಳಲ್ಲಿ 163 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಫಾಫ್ ಡುಪ್ಲೆಸಿಸ್ ಅರ್ಧಶತಕ
164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಫಾಫ್ ಡುಪ್ಲೆಸಿಸ್ ಅಮೋಘ ಆರಂಭ ಒದಗಿಸಿದರು. ಫಾಫ್ ಮತ್ತು ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮೊದಲ ವಿಕೆಟ್‌ಗೆ 81 ರನ್ ಕಲೆಹಾಕುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವನ್ನು ಸುಲಭವಾಗಿಸಿದರು. ಫಾಫ್ ಡುಪ್ಲೆಸಿಸ್ 27 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ 50 ರನ್ ಗಳಿಸಿದರು. ಜೇಕ್ ಫ್ರೇಸರ್ 32 ಎಸೆತಗಳಲ್ಲಿ 38 ರನ್ ಗಳಿಸಿದರು.
ಕನ್ನಡಿಗ ಕೆಎಲ್ ರಾಹುಲ್ 5 ಎಸೆತಗಳಲ್ಲೇ 15 ರನ್ ಗಳಿಸಿ ಅಪಾಯಕಾರಿಯಾಗಿದ್ದಾಗ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಅಭಿಷೇಕ್ ಪೊರೆಲ್ 18 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸಿದರು. ಟ್ರಿಸ್ಟಾನ್ ಸ್ಟಬ್ಸ್ 14 ಎಸೆತಗಳಲ್ಲಿ ಅಜೇಯ 21 ರನ್ ಗಳಿಸುವ ಮೂಲಕ ಡೆಲ್ಲಿಗೆ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡು ಗೆಲುವಿನ ಮೂಲಕ 4 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆರ್ ಸಿಬಿ ಮೊದಲ ಸ್ಥಾನದಲ್ಲಿದೆ.












Click it and Unblock the Notifications