DC vs LSG: ಲಕ್ನೋದಲ್ಲಿ ಮಿಂಚಿದ ಕೆಎಲ್ ರಾಹುಲ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಎಲ್‌ಎಸ್‌ಜಿ ಮಾಜಿ ನಾಯಕ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು. ರಿಷಬ್ ಪಂತ್ ತಮ್ಮ ಮಾಜಿ ತಂಡದ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋಲು ಕಂಡರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಐಡೆನ್ ಮಾಕ್ರಂ 33 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಉತ್ತಮ ಫಾರ್ಮ್ ಮುಂದುವರೆಸಿದರು. ಮಿಚೆಲ್ ಮಾರ್ಷ್ 45 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 87 ರನ್ ಕಲೆಹಾಕಿತು.

ಇವರಿಬ್ಬರ ಬಂದ ಬಳಿಕ ಬ್ಯಾಟರ್ ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳು ಸತತವಾಗಿ ವಿಕೆಟ್ ಪಡೆಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಟ್ಟಿಹಾಕಿದರು. ಕೊನೆಯ ಓವರ್ ಗಳಲ್ಲಿ ಆಯುಶ್ ಬದೋನಿ 21 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 159 ರನ್ ಗಳಿಸಲು ಕೊಡುಗೆ ನೀಡಿದರು.
ಅಚ್ಚರಿ ಎನ್ನುವಂತೆ ರಿಷಬ್ ಪಂತ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಎರಡು ಎಸೆತ ಎದುರಿಸಿದ ಅವರು ರನ್ ಗಳಿಸದೆ ಔಟಾದರು. ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಮುಕೇಶ್ ಕುಮಾರ್ 4 ಓವರ್ ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಮತ್ತು ದುಷ್ಮಂತ್ ಚಮೀರಾ ತಲಾ 1 ವಿಕೆಟ್ ಪಡೆದರು.
ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ ಉತ್ತಮ ಆಟ
160 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಸಾಧಾರಣ ಆರಂಭ ಪಡೆಯಿತು. ಕರುಣ್ ನಾಯರ್ 9 ಎಸೆತಗಳಲ್ಲಿ 15 ರನ್ ಗಳಿಸಿ ಬೇಗನೆ ಔಟಾದರು. ಆದರೆ ಬಳಿಕ ಬಂದ ಕೆಎಲ್ ರಾಹುಲ್ ಅಭಿಷೇಕ್ ಪೊರೆಲ್ ಜೊತೆ ಎರಡನೇ ವಿಕೆಟ್‌ಗೆ 69 ರನ್ ಕಲೆಹಾಕುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಮಿಂಚಿದರು. ಕೆಎಲ್ ರಾಹುಲ್ ಕೂಡ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು, 42 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 57 ರನ್ ಗಳಿಸಿದರು. ನಾಯಕ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸಿ ಮಿಂಚಿದರು.
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಲಿದ್ದು ಪ್ಲೇಆಫ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ.












Click it and Unblock the Notifications