CSK: ಸಿಎಸ್‌ಕೆ ಸೇರಿದ ಬೇಬಿ ಎಬಿಡಿ; ಆರ್‌ಸಿಬಿ ಸೇರುವ ಕನಸು ಕಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ!
ಐಪಿಎಲ್ 2025ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯ ಸೋತು, ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಪ್ಲೇಆಫ್ ತಲುಪಲು ಉಳಿದ 7 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಎಂಎಸ್ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದು ತಂಡದಲ್ಲಿ ಬದಲಾವಣೆ ಮಾಡಲಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಸಿಎಸ್‌ಕೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ತಂಡದ ಆಟಗಾರ ಗುರ್ಜಪ್ನೀತ್ ಸಿಂಗ್ ಗಾಯಗೊಂಡಿದ್ದು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ, ಬದಲೀ ಆಟಗಾರನಾಗಿ ಇದೀಗ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಬೇಬಿ ಎಬಿ ಎಂದೇ ಕರೆಯುವ ಡೆವಾಲ್ಡ್ ಬ್ರೆವಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್
ಡೆವಾಲ್ಡ್ ಬ್ರೆವಿಸ್ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅನುಭವ ಹೊಂದಿದ್ದು ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. 81 ಟಿ20 ಪಂದ್ಯಗಳನ್ನು ಆಡಿರುವ ಡೆವಾಲ್ಡ್ ಬ್ರೆವಿಸ್ 26.27 ಸರಾಸರಿಯಲ್ಲಿ 1787 ರನ್ ಗಳಿಸಿದ್ದಾರೆ. ಅವರು 144.93 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 1 ಶತಕ 7 ಅರ್ಧಶತಕ ಕೂಡ ಬಾರಿಸಿದ್ದಾರೆ. 24 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಕೂಡ ಮಾಡಿದ್ದು 18 ವಿಕೆಟ್ ಪಡೆದಿದ್ದಾರೆ. 7.43 ಎಕಾನಮಿ ಹೊಂದಿದ್ದಾರೆ.
ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್‌ನಲ್ಲೂ ಅವರು ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು ಏಪ್ರಿಲ್ 20ರಂದು ಭಾನುವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಆರ್ ಸಿಬಿ ಸೇರಲು ಆಸೆಪಟ್ಟಿದ್ದ ಬೇಬಿ ಎಬಿ
ಮೆಗಾ ಹರಾಜಿಗೆ ಮುನ್ನ ಡೆವಾಲ್ಡ್ ಬ್ರೆವಿಸ್ ಆರ್ ಸಿಬಿಗೆ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಡೆವಾಲ್ಡ್ ಬ್ರೆವಿಸ್ ಕೂಡ ಆರ್ ಸಿಬಿ ಟೀಶರ್ಟ್ ಹಾಕಿ, ಗ್ಲೌಸ್ ಮತ್ತು ಕುಕುಬರ ಬ್ಯಾಟ್ ಇದ್ದ ತಮ್ಮ ಮುದ್ದಿನ ನಾಯಿಯ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ ಮೆಗಾ ಹರಾಜಿನಲ್ಲಿ ಆರ್ ಸಿಬಿ ಬೇರೆಯದೇ ಲೆಕ್ಕಾಚಾರ ಹಾಕಿಕೊಂಡಿದ್ದರಿಂದ ಡೆವಾಲ್ಡ್ ಬ್ರೆವಿಸ್ ಅವರನ್ನು ಖರೀದಿ ಮಾಡಲಿಲ್ಲ, ಈಗ ಅವರಿಗೆ ಐಪಿಎಲ್ ಬಾಗಿಲು ತೆರೆದಿದೆ.
ಮೆಗಾ ಹರಾಜಿನಲ್ಲಿ ಗುರ್ಜಪ್ನೀತ್ ಸಿಂಗ್ ಅವರನ್ನು ಸಿಎಸ್‌ಕೆ 2.2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಡೆವಾಲ್ಡ್ ಬ್ರೆವಿಸ್ ಅವರು 2.2 ಕೋಟಿ ರೂಪಾಯಿ ಪಡೆಯಲಿದ್ದಾರೆ. ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ಸಿಎಸ್‌ಕೆ ಗೆಲುವಿನ ಹಳಿಗೆ ಮರಳಿದ್ದು, ಉಳಿದ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ತಲುಪುವ ವಿಶ್ವಾಸದಲ್ಲಿದೆ. ಸದ್ಯ ಭಾನುವಾರ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications