CK Nayudu Trophy: 73 ರನ್‌ಗಳಿಗೆ ವಿದರ್ಭ ಆಲೌಟ್; ಕರ್ನಾಟಕ ತಂಡಕ್ಕೆ ಬೃಹತ್ ಮುನ್ನಡೆ
ರಣಜಿ ಟ್ರೋಫಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ವಿದರ್ಭ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಕರ್ನಲ್ ಸಿಕೆ ನಾಯ್ಡು ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿದರ್ಭ ವಿರುದ್ಧ ಮೇಲುಗೈ ಸಾಧಿಸಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ವಿದರ್ಭ ವಿರುದ್ಧ 456 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ನಾಗಪುರದ ವಿಸಿಎ ಕಲಮನ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಅನೀಶ್ ಕೆವಿ 143 ರನ್ ಮತ್ತು ನಾಯಕ ಸಮರನ್ 194 ರನ್‌ಗಳ ಅಮೋಘ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 466 ರನ್ ಗಳಿಸಿತು. ಯಶೋವರ್ಧನ್ ಅಜೇಯ 54 ರನ್ ಗಳಿಸಿ ಕರ್ನಾಟಕ ತಂಡಕ್ಕೆ ನೆರವಾದರು.
73 ರನ್‌ಗಳಿಗೆ ವಿದರ್ಭ ಆಲೌಟ್
ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ವಿದರ್ಭ ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಮೊಹ್ಸಿನ್ ಖಾನ್ 5 ವಿಕೆಟ್ ಪಡೆದರೆ, ಪರಾಸ್ ಆರ್ಯ 4 ವಿಕೆಟ್ ಪಡೆದರು. ಯಶೋವರ್ಧನ್ ಪರಂತಾಪ್ ಒಂದು ವಿಕೆಟ್ ಪಡೆದುಕೊಂಡರು. ಎಂಡಿ ಫೈಯಾಜ್ 17 ರನ್ ಗಳಿಸಿದ್ದೇ ವಿದರ್ಭ ಪರವಾಗಿ ಬ್ಯಾಟರ್ ಗಳಿಸಿದ ದೊಡ್ಡ ಮೊತ್ತವಾಗಿದೆ. ಕರ್ನಾಟಕ ಮಾರಕ ಬೌಲಿಂಗ್ ದಾಳಿಗೆ ವಿದರ್ಭ ತತ್ತರಿಸಿ ಹೋಯಿತು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 63 ರನ್ ಗಳಿಸಿದರ. ಈ ಮೂಲಕ 456 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಪ್ರಕಾಶ್ ಚತುರ್ವೇದಿ ಅಜೇಯ 23 ರನ್ ಗಳಿಸಿದ್ದರೆ, ಕೃತಿಕ್ ಕೃಷ್ಣ ಅಜೇಯ 10 ರನ್ ಗಳಿಸಿ ಮೂರನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ.












Click it and Unblock the Notifications