Ind vs Pak: ಅಕ್ಟೋಬರ್ 14ರಂದು ಅದ್ಧೂರಿ ಕಾರ್ಯಕ್ರಮ! ವಿಶ್ವಕಪ್ ಎಂದರೆ ಭಾರತ-ಪಾಕಿಸ್ತಾನ ಪಂದ್ಯ ಅಷ್ಟೆನಾ?
ಭಾರತದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ಆಯೋಜನೆ ಆದಾಗಿನಿಂದ ಬಿಸಿಸಿಐ ಒಂದಲ್ಲ ಒಂದು ಎಡವಟ್ಟು ಮಾಡುತ್ತಲೇ ಇದೆ. ಪಂದ್ಯದ ದಿನಾಂಕ ಬದಲಾವಣೆ, ಟಿಕೆಟ್ ಮಾರಾಟ ಗೊಂದಲ, ಉದ್ಘಾಟನಾ ಸಮಾರಂಭ, ಕಳಪೆ ಔಟ್‌ಫೀಲ್ಡ್ ಮುಂತಾದವುಗಳ ಬಗ್ಗೆ ಅಭಿಮಾನಿಗಳು ಟೀಕಿಸುತ್ತಲೇ ಇದ್ದಾರೆ.
ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮುನ್ನ ಬಿಸಿಸಿಐ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದೆ.

ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಮನರಂಜನಾ ಕಾರ್ಯಕ್ರಮ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಮೊದಲು ಪ್ರದರ್ಶನ ನೀಡಲು ಅರಿಜಿತ್ ಸಿಂಗ್ ಅವರನ್ನು ಕಲಾವಿದರಾಗಿ ಬಿಸಿಸಿಐ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ರಜಿನಿಕಾಂತ್, ಅಮಿತಾಬ್ ಬಚ್ಚನ್ ಹಾಜರು
ದೈನಿಕ್ ಜಾಗರಣ್ ವರದಿಯ ಪ್ರಕಾರ, ಭಾರತ ಪಾಕಿಸ್ತಾನ ಪಂದ್ಯಕ್ಕೆ ಮುನ್ನ ವರ್ಣರಂಜಿತ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಸಚಿನ್ ತೆಂಡೂಲ್ಕರ್, ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ತಾರೆಗಳು ಭಾಗವಹಿಸುತ್ತಾರೆ. ಭವ್ಯ ಸಮಾರಂಭದಲ್ಲಿ ಜಯ್ ಶಾ ಅವರ ತಂದೆ ಅಮಿತ್ ಶಾ (ಗೃಹ ಸಚಿವರು) ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
ನಡೆಯದ ಉದ್ಘಾಟನಾ ಸಮಾರಂಭ
ಅಕ್ಟೋಬರ್ 5 ರಂದು ನ್ಯೂಜಿಲೆಂಡ್ ಇಂಗ್ಲೆಂಡ್ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯ ಪ್ರಾರಂಭವಾಗುವ ಮೊದಲು ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿತ್ತು. ಅವರು ಆಶಾ ಭೋಂಸ್ಲೆ, ಶಂಕರ್ ಮಹಾದೇವನ್, ಶ್ರೇಯಾ ಘೋಷಾಲ್, ರಣವೀರ್ ಸಿಂಗ್ ಮತ್ತು ತಮನ್ಹಾ ಭಾಟಿಯಾ ಅವರಂತಹ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು, ಕೊನೆ ಕ್ಷಣದಲ್ಲಿ ಉದ್ಘಾಟನಾ ಸಮಾರಂಭವನ್ನು ರದ್ದುಮಾಡಿತ್ತು ಎಂದು ದೈನಿಕ್ ಜಾಗರಣ್ ವರದಿ ಮಾಡಿತ್ತು. ಉದ್ಘಾಟನಾ ಸಮಾರಂಭ ರದ್ದಾದ ಬಳಿಕ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದರು.
ಮತ್ತೆ ಕೋಪಗೊಂಡ ಅಭಿಮಾನಿಗಳು
ಈಗ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈ ಸಮಾರಂಭ ಆಯೋಜನೆ ಮಾಡಲಾಗಿದೆ. ಏಕದಿನ ವಿಶ್ವಕಪ್ ಎಂದರೆ ಬರೀ ಭಾರತ - ಪಾಕಿಸ್ತಾನ ಪಂದ್ಯ ಮಾತ್ರವಾ ಎಂದು ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಬಿಸಿಸಿಐಗೆ ಬರಿ ಪ್ರಚಾರ ಮುಖ್ಯವಾಯಿತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಭಾರತ ಪಾಕಿಸ್ತಾನ ಪಂದ್ಯಕ್ಕೆ ಅಷ್ಟೊಂದು ಮಹತ್ವ ಯಾಕೆ, ಅದು ಕೂಡ ಸಾಮಾನ್ಯ ವಿಶ್ವಕಪ್ ಪಂದ್ಯ ಅಷ್ಟೆ, ಇದೇನು ಫೈನಲ್ ಅಲ್ಲವಲ್ಲ ಎಂದು ಕೆಲವರು ಕೇಳಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಂಡಿತ್ತು, ಅಂತಾರಾಷ್ಟ್ರೀಯ ಮಟ್ಟದ ಬಿಸಿಸಿಐ ಟೀಕೆಗಳನ್ನು ಕೇಳಬೇಕಾಯಿತು. ಉದ್ಘಾಟನಾ ಸಮಾರಂಭ ಇಲ್ಲವೆಂದ ಮೇಲೆ, ಅಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆಯೋಜನೆ ಮಾಡುವ ಅವಶ್ಯಕತೆ ಏನಿತ್ತು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.












Click it and Unblock the Notifications