APL: ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಹರಾಜಿಗೆ 3 ಭಾರತೀಯ ಆಟಗಾರರ ನೋಂದಣಿ..
ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯಂತ್ರಿತ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಮೂವರು ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದಾರೆ. ದುಬೈನಲ್ಲಿ ನವೆಂಬರ್ 3ರಂದು ನಡೆಯಲಿರುವ ಮುಂಬರುವ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ (APL) ಹರಾಜಿಗಾಗಿ ಇವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಸಕ್ರಿಯ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ. ಹೀಗಾಗಿ ಭಾರತೀಯ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ತಮ್ಮ ವೃತ್ತಿಜೀವನವನ್ನು ಮುಂದುವರೆಸಲು ಆಟಗಾರರು ವಿದೇಶಿ ಫ್ರಾಂಚೈಸಿ ಲೀಗ್‌ಗಳತ್ತ ಮುಖ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಈ ಮೂವರು ಆಟಗಾರರ ಸೇರ್ಪಡೆ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಿಗೆ ಹೆಚ್ಚಿನ ಬಲ ತುಂಬುವ ನಿರೀಕ್ಷೆಯಿದೆ.

ಎಪಿಎಲ್‌ಗೆ ನೋಂದಾಯಿಸಿದ 3 ಭಾರತೀಯ ಆಟಗಾರರು
* ವಿಜಯ್ ಶಂಕರ್: ಇವರು ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ. 35 ವರ್ಷದ ಭಾರತದ ಮಾಜಿ ಆಲ್‌ರೌಂಡರ್ ವಿಜಯ್ ಶಂಕರ್ ಅವರು, ಟೀಮ್ ಇಂಡಿಯಾ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ 78 ಪಂದ್ಯಗಳಿಂದ 1,233 ರನ್ ಬಾರಿಸಿದ್ದು, 9 ವಿಕೆಟ್ ಪಡೆದಿದ್ದಾರೆ. ಮೇ 2026ರಲ್ಲಿ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದರು. 2025ರ ಸೀಸನ್‌ನಲ್ಲಿ ಸಿಎಸ್‌ಕೆ ಪರ ಕೊನೆಯದಾಗಿ ಐಪಿಎಲ್ ಆಡಿದ್ದರು.
* ಕೆ.ಎಸ್. ಭರತ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳನ್ನು ಪ್ರತಿನಿಧಿಸಿದ್ದಾರೆ. ಭಾರತದ ಪರ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಸ್.ಭರತ್, ಜೂನ್ 2026ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. ಬಳಿಕ ಯುಎಇ ಟಿ20 ಲೀಗ್ ಸೇರಿದಂತೆ ವಿವಿಧ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದಾರೆ.
ಮುರುಗನ್ ಅಶ್ವಿನ್: ತಮಿಳುನಾಡಿನ ಮಾಜಿ ಲೆಗ್ ಸ್ಪಿನ್ನರ್ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳ ಪರ ಕಣಕ್ಕಿಳಿದಿದ್ದರು. ಐಪಿಎಲ್‌ನಲ್ಲಿ 44 ಪಂದ್ಯಗಳನ್ನಾಡಿ 35 ವಿಕೆಟ್‌ಗಳನ್ನು ಕಬಳಿಸಿರುವ ಮುರುಗನ್ ಅಶ್ವಿನ್, ಮೇ 2026ರಲ್ಲಿ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇದೀಗ ಜಾಗತಿಕ ಲೀಗ್‌ಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮುಂಬರುವ ಸವಾಲುಗಳ ವಿವರ
ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಈ ಅನುಭವಿ ಭಾರತೀಯ ಆಟಗಾರರನ್ನು ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲು ಎಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರುವ ಸಾಧ್ಯತೆ ಇದೆ. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ಸುದೀರ್ಘ ಅನುಭವ ಎಪಿಎಲ್ ತಂಡಗಳಿಗೆ ಸಹಕಾರಿಯಾಗಲಿದೆ.
ಇನ್ನೂ ಐಪಿಎಲ್ 2027 ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ಸೀಸನ್ ಆಗುವ ನಿರೀಕ್ಷೆಯಿದೆ. ಈ ಟೂರ್ನಿಯಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಆಟಗಾರರ ಮಿನಿ ಹರಾಜು, ತಂಡಗಳ ಬದಲಾವಣೆ ಹಾಗೂ ಹೊಸ ತಂತ್ರಗಳು ಕುತೂಹಲ ಮೂಡಿಸಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರ ಪ್ರದರ್ಶನದ ಮೇಲೆ ಅಭಿಮಾನಿಗಳ ಗಮನವಿರಲಿದೆ.
ಅದರಲ್ಲೂ ವಿಶೇಷವಾಗು ರಾಯಲ್ ಚಾಲೆಂಜರ್ಸ್ ಬೆಂಗಲೂರು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲು ಎದುರಿಸಲಿದೆ. ತಂಡಗಳ ತಯಾರಿ, ಆಟಗಾರರ ಆಯ್ಕೆ ಮತ್ತು ಪಂದ್ಯಗಳ ವೇಳಾಪಟ್ಟಿ ಪ್ರಕಟವಾದ ಬಳಿಕ ಟೂರ್ನಿಯ ಬಗ್ಗೆ ಮತ್ತಷ್ಟು ಸ್ಪಷ್ಟ ಚಿತ್ರಣ ಸಿಗಲಿದೆ.


Click it and Unblock the Notifications
