ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ?
ಶಿವಮೊಗ್ಗ, ಮೇ 28: ಸಚಿವ ಸ್ಥಾನ ಬೇಡ ಆದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ. ಪಕ್ಷವನ್ನು ಬಲಪಡಿಸುತ್ತೇನೆ ಎಂದು ಕಳೆದ ವಾರ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೂಡಾರ್ಥದಲ್ಲಿ ಪತ್ರ ಬರೆದಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಸೂಕ್ತ ಸ್ಥಾನಮಾನ ನೀಡಲು ಆಲೋಚಿಸಿದ್ದಾರೆ ಎಂದು ವರದಿಯಾಗಿದೆ.
ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ನೀಡಲು ಹಿಂದೇಟು ಹಾಕಿರುವ ಬಿಜೆಪಿ ವರಿಷ್ಠರು ಅವರನ್ನು ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಕಲ್ಪಿಸಿ, ಪಕ್ಷವು ಅಧಿಕಾರದಲ್ಲಿರುವ ಯಾವುದಾದರೊಂದು ರಾಜ್ಯಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಬಿಜೆಪಿ ವರಿಷ್ಠರು ಆಲೋಚಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇನ್ನು 15 ದಿನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪುನಾರಚನೆಯಾಗಲಿದೆ. ಆ ವೇಳೆ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಲಭಿಸಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಲವು ಪ್ರಧಾನ ಕಾರ್ಯದರ್ಶಿಗಳು ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಬಿಜೆಪಿಯಲ್ಲಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತಕುಮಾರ್ ಅವರು ಈಗಾಗಲೇ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಭಡ್ತಿ ಪಡೆದಿದ್ದಾರೆ. ಹಾಗಾಗಿ ಅವರ ಸ್ಥಾನವನ್ನು ಯಡಿಯೂರಪ್ಪ ತುಂಬಲಿ ಎಂಬ ಲೆಕ್ಕಾಚಾರ ವರಿಷ್ಠರದ್ದಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications