ಸದನದಲ್ಲಿ ಅಂಗಿ ಬಿಚ್ಚಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪ್ರತಿಭಟನೆ: ಐಡಿಯಾ ಕೊಟ್ಟಿದ್ದು ಅದೇ ಪಕ್ಷದ ಶಾಸಕ!
ಬೆಂಗಳೂರು, ಮಾರ್ಚ್ 9: ಹಾಲಿ ವಿಧಾನಸಭಾ ಅಧಿವೇಶನದಲ್ಲಿ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದು ಭಾರೀ ಸುದ್ದಿಯಾಗಿತ್ತು.
ಈಗ, ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಲು ಅವರಿಗೆ ಐಡಿಯಾ ಕೊಟ್ಟಿದ್ದು ಯಾರು ಎನ್ನುವ ವಿಚಾರವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಂಗಮೇಶ್ ಅವರೇ ಬಾಯಿಬಿಟ್ಟಿದ್ದಾರೆ.
ಸಂಗಮೇಶ್ ಅವರು ಶರ್ಟ್ ಬಿಚ್ಚಿ ಸದನದೊಳಗೆ ಪ್ರತಿಭಟನೆ ನಡೆಸಿದ್ದಕ್ಕೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಗಮೇಶ್ ಅವರನ್ನು ಹತ್ತು ದಿನ ಸದನದಿಂದ ಅಮಾನತು ಮಾಡಿದ್ದರು. ಸ್ಪೀಕರ್ ಅವರ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತ ಪಡಿಸಿದ್ದರು.
ಸೋಮವಾರ (ಮಾ 8) ನಡೆದ ಸಿಎಲ್ ಪಿ ಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ್ದು ಯಾರು ಎನ್ನುವ ವಿಚಾರವನ್ನು ಸಂಗಮೇಶ್ ಹೇಳಿದ್ದಾರೆ. ಆ ವೇಳೆ, ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು, ಸಂಗಮೇಶ್‌ಗೆ ಬುದ್ದಿಮಾತನ್ನು ಹೇಳಿದ್ದಾರೆಂದು ವರದಿಯಾಗಿದೆ.

ವಿಧಾನಸಭೆಯ ಕಲಾಪದ ವೇಳೆ
ವಿಧಾನಸಭೆಯ ಕಲಾಪದ ವೇಳೆ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯದ ಮೇಲೆ ಚರ್ಚೆ ನಡೆಯುತ್ತಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ, ಶಾಸಕ ಸಂಗಮೇಶ್ ತಮ್ಮ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು. ಇವರ ನಡುವಳಿಕೆ ಸದನದ ಘನತೆಗೆ ಚ್ಯುತಿ ತಂದಿದೆ ಎಂದು ಸ್ಪೀಕರ್ ಅವರು ಸಂಗಮೇಶ್ ಅವರನ್ನು ಅಮಾನತು ಮಾಡಿದ್ದರು.

ಸೋಮವಾರ ನಡೆದ ಕಾಂಗ್ರೆಸ್ ಶಾಸಕರ ಸಭೆ
ಸೋಮವಾರ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ನಮ್ಮ ಪಕ್ಷದ ಶಾಸಕರ ಮಾತಿನಂತೆ ಶರ್ಟ್ ಬಿಚ್ಚಿದ್ದಾಗಿ ಸಂಗಮೇಶ್ ಹೇಳಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ನನಗೆ ಈ ಐಡಿಯಾ ಕೊಟ್ಟಿದ್ದು ಎಂದು ಹೇಳಿದ್ದಾರೆ. ಈ ರೀತಿ ಪ್ರತಿಭಟಿಸಿದರೆ ಅದು ಇನ್ನೂ ಪವರ್ ಫುಲ್ ಆಗಿರುತ್ತದೆ ಎಂದು ಜಮೀರ್ ನನಗೆ ಹೇಳಿದರು ಎಂದು ಸಂಗಮೇಶ್ ಅಳಲು ತೋಡಿಕೊಂಡಿದ್ದಾರೆಂದು ವರದಿಯಾಗಿದೆ.

ಜಮೀರ್ ಹೇಳಿರುವುದಕ್ಕೆ ನಾನು ಆ ರೀತಿ ನಡೆದುಕೊಂಡೆ
ಜಮೀರ್ ಹೇಳಿರುವುದಕ್ಕೆ ನಾನು ಆ ರೀತಿ ನಡೆದುಕೊಂಡೆ ಎಂದು ಸಂಗಮೇಶ್ ಹೇಳಿದ್ದಾರೆ. ಆಗ, ಮಧ್ಯಪ್ರವೇಶಿಸಿದ ರಮೇಶ್ ಕುಮಾರ್, 'ನಾಳೆ ಪ್ಯಾಂಟ್ ಬಿಚ್ಚಲು ಹೇಳಿದರೆ ಏನ್ ಮಾಡುತ್ತೀಯಾ, ಮರ್ಯಾದೆ ಹೋಗುತ್ತೆ, ಹುಷಾರಪ್ಪಾ' ಎನ್ನುವ ಬುದ್ದಿಮಾತನ್ನು ಹೇಳಿದ್ದಾರೆ.

ರಮೇಶ್ ಕುಮಾರ್ ಬುದ್ದಿಮಾತು
ಒಟ್ಟಿನಲ್ಲಿ ಜಮೀರ್ ಮಾತನ್ನು ಕೇಳಿ ಸಂಗಮೇಶ್ ಈಗ ಮಾರ್ಚ್ ಹನ್ನೆರಡರವರೆಗೆ ಅಮಾನತುಗೊಂಡಿದ್ದಾರೆ. ನಿಯಮ 348ರಡಿಯಲ್ಲಿ ಸ್ಪೀಕರ್ ಅವರನ್ನು ಅಮಾನತುಗೊಳಿಸಿದ್ದಾರೆ. ಈ ರೀತಿ ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸುವುದು ಹೊಸದೇನಲ್ಲ. ಈ ಹಿಂದೆ, ಗೂಳಿಹಟ್ಟಿ ಶೇಖರ್ ಕೂಡಾ ಇದೇ ರೀತಿ ಸದನದಲ್ಲಿ ವರ್ತಿಸಿದ್ದರು.












Click it and Unblock the Notifications