ಭದ್ರಾ ಡ್ಯಾಂನಿಂದ 5,800 ಕ್ಯೂಸೆಕ್ ನೀರು ಬಿಡುಗಡೆ, ವೇಳಾಪಟ್ಟಿ
ಶಿವಮೊಗ್ಗ, ಫೆಬ್ರವರಿ 02: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ವಿಶೇಷ ಕಾರಣಕ್ಕೆ ತುಂಗಭದ್ರಾ ನದಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ರೈತರ ಬದುಕಿಗೆ ಬಹುದೊಡ್ಡ ಆಸರೆ ಭದ್ರಾ ಜಲಾಶಯ. ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಡ್ಯಾಂ ಭರ್ತಿಯಾಗಿದ್ದು, ಬೇಸಿಗೆಯಲ್ಲಿ ರೈತರಿಗೆ ಯಾವುದೇ ಆತಂಕ ಬೇಡ.
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ಪ್ರಯುಕ್ತ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ಕ.ನೀ.ನಿ.ನಿ., ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ತಿಳಿಸಿದ್ದಾರೆ.

ನೀರು ಬಿಡುಗಡೆ ವೇಳಾಪಟ್ಟಿ; ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಫೆಬ್ರವರಿ 14ರಂದು ನಡೆಯಲಿದ್ದು ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದಾರೆ.
ಜನರಿಗೆ ಅನುಕೂಲ ಕಲ್ಪಿಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಫೆಬ್ರವರಿ 5 ರಿಂದ 11 ರವರೆಗೆ ಒಟ್ಟು 5,800 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಈ ವಿಶೇಷ ಕಾರಣಕ್ಕಾಗಿ ಮಾತ್ರ ನದಿಗೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೂವಿನಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ಹಾಗೂ ಜಾತ್ರೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಅಂಗವಾಗಿ ಭಾರತ ಹುಣ್ಣಿಮೆ, ಧ್ವಜಾರೋಹಣ, ತ್ರಿಶೂಲಪೂಜೆ, ಗೊರವಯ್ಯನವರಿಂದ ಕಾರ್ಣಿಕ ನುಡಿಯುವುದು ಈ ಜಾತ್ರೆಯ ವಿಶೇಷವಾಗಿದೆ.
ಕಾರ್ಣಿಕ ಕೇಳಲು ಲಕ್ಷಾಂತರ ಭಕ್ತರು ಜಮಾವಣೆಗೊಳ್ಳುತ್ತಾರೆ. ಮುಂದಿನ ವರ್ಷದ ಮಳೆ, ಬೆಳೆ ಬಗ್ಗೆ ಕಾರ್ಣಿಕ ಹೇಳಲಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಜಯನಗರ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ನದಿಗೆ ನೀರು ಬಿಡುಗಡೆ ಮಾಡಿರುವ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಹಾಗೂ ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ.
ಈಗಾಗಲೇ ಭದ್ರಾ ಎಡದಂಡೆ ಕಾಲುವೆಗೆ ಬೇಸಿಗೆ ಬೆಳೆಗಳಿಗೆ ನೀರು ಹರಿಸುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಜನವರಿ 5ರಿಂದಲೇ ನೀರು ಹರಿಸಲಾಗುತ್ತಿದೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸುವುವ ದಿನಾಂಕವನ್ನು ಪ್ರಕಟಿಸಲಾಗಿದೆ.
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2024-25ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ರೈತರು ಬೇಸಿಗೆ ಬೆಳೆ ಬೆಳೆಯುವಲ್ಲಿ ನಿರತರಾಗಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಡದಂಡೆ ಕಾಲುವೆಗೆ ಜನವರಿ 5, ಬಲದಂಡೆ ಕಾಲುವೆಗೆ ಜನವರಿ 8ರಿಂದ ನೀರು ಹರಿಸಲಾಗುತ್ತಿದೆ.
ಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನಿರಂತರವಾಗಿ 120 ದಿನ ನೀರು ಹರಿಸಲಾಗುತ್ತದೆ. ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆ ನಾಲೆಗೆ 2650 ಕ್ಯುಸೆಕ್ ನೀರು ಹರಿಸಲಾಗುತ್ತದೆ. ರೈತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಉತ್ತಮವಾದ ಬೆಲೆ ಬೆಳೆಯಬಹುದು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications