Bhadra Dam: ಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಜನರಿಗೆ ಎಚ್ಚರಿಕೆ

ಶಿವಮೊಗ್ಗ, ಜುಲೈ 27: ಮುಂಗಾರು ಮಳೆಯ ಅಬ್ಬರಕ್ಕೆ ಭದ್ರಾ ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ಡ್ಯಾಂ ಒಳ ಹರಿವು ಏರಿಕೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ನೀರು ಹೊರ ಬಿಡುವ ಕುರಿತು ಮೊದಲ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಕುರಿತು ಸುಜಾತ ಎನ್., ಸದಸ್ಯ ಕಾರ್ಯದರ್ಶಿಗಳು, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ, ಹಾಗೂ ಅಧೀಕ್ಷಕ ಅಭಿಯಂತರರು ಕ.ನೀ.ನಿ.ನಿ., ಭದ್ರಾ ಯೋಜನಾ ವೃತ್ತ, ಬಿ. ಆರ್. ಪ್ರಾಜೆಕ್ಟ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

Water Could Be Released Any Time From Bhadra Dam Alert Issued

ಪ್ರಕಟಣೆಯ ವಿವರಗಳು: ಈ ಪ್ರಕಟಣೆ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ, ಈ ಮೂಲಕ ತಿಳಿಯಪಡಿಸುವುದೇನೆಂದರೆ, ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ, ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ ಎಂದು ತಿಳಿಸಿದೆ.

ದಿನಾಂಕ 26/07/2024ರಂದು ಜಲಾಶಯದ ನೀರಿನ ಮಟ್ಟ 174 ಅಡಿ 3 ಇಂಚುಗಳಿಗೆ ತಲುಪಿರುತ್ತದೆ. ಹರಿದು ಬರುವ ಒಳಹರಿವಿನ ಪ್ರಮಾಣ 35,000 ರಿಂದ 40,000 ಕ್ಯೂಸೆಕ್ ಇದ್ದು, ಇದೇ ರೀತಿ ಮುಂದುವರೆದಲ್ಲಿ ಭದ್ರಾ ಜಲಾಶಯದ ಗರಿಷ್ಟ ನೀರಿನ ಮಟ್ಟಕ್ಕೆ ಅತೀ ಶೀಘ್ರವಾಗಿ ಭರ್ತಿಯಾಗುವ ಸಂಭವವಿದೆ ಎಂದು ಹೇಳಿದೆ.

ಆದುದರಿಂದ ಅಣೆಕಟ್ಟು ಸುರಕ್ಷತೆಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ Spill Way Gate ಮುಖಾಂತರ ನದಿಗೆ ಬಿಡಲಾಗುವುದು ಎಂದು ಮಾಹಿತಿ ನೀಡಿದೆ.

ಆದುದರಿಂದ ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಈ ಮೂಲಕ ಕೋರಲಾಗಿದೆ.

ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಭದ್ರಾ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳಿಗೆ ಭದ್ರಾ ಡ್ಯಾಂ ನೀರು ಪ್ರಮುಖ ಆಸರೆಯಾಗಿದೆ.

ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಭದ್ರಾ ಡ್ಯಾಂ ನೀರಿನ ಮಟ್ಟ ಕುಸಿತಗೊಂಡಿತ್ತು. ಕೃಷಿ ಚಟುವಟಿಕೆಗೆ ನೀರು ಬಿಡುವುದಿಲ್ಲ ಎಂದು ಘೋಷಣೆ ಮಾಡಲಾಗಿತ್ತು, ಕೇವಲ ಕುಡಿಯುವ ನೀರು ಪೂರೈಕೆಗಾಗಿ ನೀರನ್ನು ಉಳಿಸಿಕೊಳ್ಳಲಾಗಿತ್ತು.

ಈ ಬಾರಿ ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ. ಭತ್ತ ನಾಟಿ ಮಾಡುವ ಭರವಸೆಯು ರೈತರಲ್ಲಿದೆ. ಭದ್ರಾವತಿ. ಹೊನ್ನಾಳಿ. ಹರಿಹರ. ದಾವಣಗೆರೆ ಭಾಗದ ರೈತರು ಡ್ಯಾಂ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ನೀರಿನ ಒಳಹರಿವು ಹೆಚ್ಚಾಗಿ, ಬೇಗ ಡ್ಯಾಂ ಭರ್ತಿಯಾಗಲಿ. ನಾಲೆಗಳಿಗೆ ನೀರು ಹರಿಸುವ ದಿನಾಂಕವನ್ನು ಪ್ರಕಟಿಸಲಿ ಎಂದು ರೈತರು ಕಾಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಭದ್ರಾ ಡ್ಯಾಂನ ತಳಮಟ್ಟದ ರಿವರ್‌ ಗೇಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಗೇಟ್ ಸರಿಪಡಿಸುವ ಕಾಮಗಾರಿ ವಿಳಂಬವಾದ ಕಾರಣ ಸುಮಾರು 1,500 ರಿಂದ 2 ಸಾವಿರ ಕ್ಯುಸೆಕ್ ನೀರು ನದಿಗೆ ಹರಿದಿತ್ತು. ಈ ಕುರಿತು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಗೇಟ್ ರಿಪೇರಿ ಕಾರ್ಯ ನಡೆಸುವಾಗ ಉಂಟಾದ ತಾಂತ್ರಿಕ ದೋಷದ ಪರಿಣಾಮ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ನದಿಗೆ ಸೋರಿಕೆಯಾಗುತ್ತಿತ್ತು. ಮೊದಲೇ ಕಡಿಮೆ ನೀರು ಸಂಗ್ರಹ ಇರುವಾಗ ಅಧಿಕಾರಿಗಳ ಈ ಯಡವಟ್ಟಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ತಾಂತ್ರಿಕ ತಜ್ಞರ ತಂಡ, ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 48 ಗಂಟೆಗಳ ಕಾರ್ಯಾಚರಣೆ ನಡೆಸಿ ನದಿಗೆ ನೀರು ಸೋರಿಕೆಯಾಗುವುದುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+