ಶಿವಮೊಗ್ಗ ಚುನಾವಣೆ; ಮತ್ತಷ್ಟು ಬಲಪಡೆದ ಆಯನೂರು ಮಂಜುನಾಥ್!
ಶಿವಮೊಗ್ಗ, ಏಪ್ರಿಲ್ 28; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ ಸಹ ಒಂದು. ಕ್ಷೇತ್ರದ ರಾಜಕಾರಣದ ಕಾವು ದಿನೇ ದಿನೇ ಏರುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಜೆಡಿಎಸ್ ಪಕ್ಷ ಸೇರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಸಹ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಹೆಚ್. ಸಿ. ಯೋಗೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಕೆ. ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದರು. ಈ ಸಲದ ಚುನಾವಣೆಗೆ ಬಿಜೆಪಿಯಿಂದ ಎಸ್. ಎನ್. ಚೆನ್ನಬಸವಪ್ಪ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಹೆಚ್. ಸಿ. ಯೋಗೇಶ್ ಮತ್ತು ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು.

ವಿಪ್ರ ಸಮಾಜದ ಯುವ ವೇದಿಕೆ ಮುಖಂಡ ರಾಘವೇಂದ್ರ ಉಡುಪ ಈ ಬಾರಿಯ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದ ಅಭ್ಯರ್ಥಿ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ವಿಪ್ರ ಸಮಾಜದ ಪ್ರಭಾವಿ ನಾಯಕ ಕೆ. ಬಿ. ಪ್ರಸನ್ನ ಕುಮಾರ್ ಜೆಡಿಎಸ್ ಸೇರಿರುವ ಹಿನ್ನಲೆಯಲ್ಲಿ ಸಮಾಜ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಬೆಂಬಲಿಸಲಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ.
ಬ್ರಾಹ್ಮಣರ ಪ್ರಾಬಲ್ಯ; ಶಿವಮೊಗ್ಗ ನಗರ ಕ್ಷೇತ್ರ ಬ್ರಾಹ್ಮಣರ ಹಿಡಿತದಲ್ಲಿದೆ ಎಂಬ ವಿಶ್ಲೇಷಣೆ ಇದೆ. ಇದಕ್ಕೆ ಕಾರಣ ಕ್ಷೇತ್ರದ 14 ಚುನಾವಣೆಯಲ್ಲಿ 8 ಬಾರಿ ಬ್ರಾಹ್ಮಣರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಸುಮಾರು 41 ಸಾವಿರ ಬ್ರಾಹ್ಮಣ ಮತಗಳು ಇವೆ. ಬಿಜೆಪಿಯ ಕೆ. ಎಸ್. ಈಶ್ವರಪ್ಪ ಗೆಲುವಿನಲ್ಲಿ ಬಿಜೆಪಿ ಬೆಂಬಲಿಸುವ ಬ್ರಾಹ್ಮಣ ಮತಗಳು ಪಾಲು ಇತ್ತು ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ಆದರೆ ಈ ಬಾರಿಯ ಚುನಾವಣೆಯಲ್ಲಿ ಲೆಕ್ಕಾಚಾರ ಬದಲಾಗಿದೆ.

ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಕೆ. ಬಿ. ಪ್ರಸನ್ನ ಕುಮಾರ್ ಜೆಡಿಎಸ್ ಸೇರಿದ್ದಾರೆ. ಆಯನೂರು ಮಂಜುನಾಥ್, ಕೆ. ಬಿ. ಪ್ರಸನ್ನ ಕುಮಾರ್ ಸೇರ್ಪಡೆ ಬಳಿಕ ಜೆಡಿಎಸ್ ಬಲ ಹೆಚ್ಚಿದೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಪ್ರಭಾವವೂ ಸೇರಿ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಇನ್ನಷ್ಟು ಬಲವಾಗಿದೆ ಎಂದು ಅಂದಾಜಿಸಲಾಗಿದೆ.
ಸಮುದಾಯದ ಕಡೆಗಣನೆ; ರಾಘವೇಂದ್ರ ಉಡುಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ವಿಪ್ರ ಸಮುದಾಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ. ಇಷ್ಟು ವರ್ಷ ಸಮಾಜವನ್ನು ಬಳಕೆ ಮಾಡಿಕೊಂಡರೂ ಯಾವುದೇ ಸ್ಥಾನ ಮಾನ ನೀಡಿಲ್ಲ. ನಮ್ಮ ಸಮಾಜ ಪ್ರಬಲವಾಗಿರುವ ಕಡೆಯೂ ನಮ್ಮನ್ನು ಪರಿಗಣಿಸಿಲ್ಲ. ಸಮಾಜದ ಪ್ರಭಾವಿ ರಾಜಕಾರಣಿ ಕೆ. ಬಿ. ಪ್ರಸನ್ನ ಕುಮಾರ್ ತೆಗೆದುಕೊಂಡ ನಿಲುವಿಗೆ ನಾವು ಬದ್ಧರಾಗಿದ್ದೇವೆ" ಎಂದರು.
"ಮುಖ್ಯಮಂತ್ರಿಯಾಗಿದ್ದಾಗ ಎಚ್. ಡಿ. ಕುಮಾರಸ್ವಾಮಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕಾರಣರಾಗಿದ್ದು, ಅದೇ ರೀತಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಭವನ ನಿರ್ಮಾಣಕ್ಕೆ ನಿವೇಶನ ಸಹ ಮಂಜೂರು ಮಾಡಿದ್ದರು. ಎಚ್. ಡಿ. ದೇವೇಗೌಡರ ಕುಟುಂಬ ಶೃಂಗೇರಿ ಮಠಕ್ಕೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದೆ" ಎಂದು ಹೇಳಿದರು.
2013ರ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಆದರೆ ಈ ಬಾರಿ ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದಾರೆ. ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ ಹೊಂದಿದ್ದು, ಜಿಲ್ಲೆಯಲ್ಲಿ ಪಕ್ಷದ ಬಲ ಕುಸಿದಿತ್ತು. ಆಯನೂರು ಮಂಜುನಾಥ್ ಸೇರ್ಪಡೆ ಬಳಿಕ ಪಕ್ಷಕ್ಕೆ ಬಲ ಹೆಚ್ಚಾಗಿದೆ.












Click it and Unblock the Notifications