'ಸೋಂಕಿತರನ್ನು ನಮ್ಮ ಊರಲ್ಲಿ ಕ್ವಾರಂಟೈನ್ ಮಾಡ್ಬೇಡಿ': ಶಿವಮೊಗ್ಗ ಗ್ರಾಮಸ್ಥರು ಆಕ್ರೋಶ
'ಗ್ರೀನ್ ಝೋನ್'ನಲ್ಲಿದ್ದ ಶಿವಮೊಗ್ಗದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಲಗ್ಗೆ ಇಟ್ಟುಬಿಟ್ಟಿದೆ. ಗುಜರಾತಿನ ಅಹಮದಾಬಾದ್ ನಿಂದ ಬಂದಿದ್ದ 9 ಜನರ ಪೈಕಿ 8 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೀಗಿರುವಾಗಲೇ, ಉತ್ತರ ಪ್ರದೇಶದಿಂದ ಶಿವಮೊಗ್ಗಕ್ಕೆ 10 ಮಂದಿ ಕಾರ್ಮಿಕರು ವಾಪಸ್ ಆಗಿದ್ದಾರೆ. ಆ 10 ಮಂದಿ ಕಾರ್ಮಿಕರನ್ನು ಶಿವಮೊಗ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಶಿವಮೊಗ್ಗಗೂ ವಕ್ಕರಿಸಿದ ಕೊರೊನಾ: ಅನಗತ್ಯ ಓಡಾಟ ಬೇಡ ಎಂದ ಈಶ್ವರಪ್ಪ
ಆದರೆ, ಶಾಲೆಯಲ್ಲಿ ಕ್ವಾರಂಟೈನ್ ಬೇಡ ಎಂದು ಗೊಂದಿಚಟ್ನಳ್ಳಿ ಗ್ರಾಮಸ್ಥರು ಕಾರ್ಮಿಕರನ್ನು ಕರೆ ತಂದಿದ್ದ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿರುವ ಶಾಲೆಯ ಒಳಗೆ ಬಸ್ ಬಿಡದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ರೋಗ ಪೀಡಿತ ವ್ಯಕ್ತಿಗಳನ್ನು ನಮ್ಮ ಊರಿನಲ್ಲಿ ಕ್ವಾರಂಟೈನ್ ಮಾಡಬೇಡಿ'' ಎಂದು ಗೋಂದಿಚಟ್ನಹಳ್ಳಿ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಾಂತರ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.