ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆ ಅಪ್‌ಡೇಟ್
ಶಿವಮೊಗ್ಗ, ಮಾರ್ಚ್ 11: ಶಿವಮೊಗ್ಗ ಸಮೀಪದ ಹೊಳಲೂರು ಏತ ನೀರಾವರಿ ಯೋಜನೆ ಕುರಿತು ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್. ಎಸ್. ಬೋಸರಾಜು ಅಪ್‌ಡೇಟ್ ನೀಡಿದ್ದಾರೆ. ವಿವಿಧ ಕಾರಣಕ್ಕೆ ಈ ಯೋಜನೆಯ ಕಾಮಗಾರಿ ತಡವಾಗುತ್ತಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಸಚಿವರು ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

"ಶಿವಮೊಗ್ಗ ಸಮೀಪದ ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನೀರಾವರಿ ತಜ್ಞರ ಸಲಹೆಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಕೈಗೆತ್ತಿಕೊಳ್ಳಲಾಗುವುದು" ಎಂದರು.
ಶಾಸಕಿ ಇಟ್ಟ ಬೇಡಿಕೆ ಏನು?; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್, ಸ್ಥಳೀಯ ಮುಖಂಡರು ಅಪೂರ್ಣಗೊಂಡಿರುವ ಹಾಗೂ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ಏತ ನೀರಾವರಿ ಯೋಜನೆಯ ಪ್ರಾಥಮಿಕ ಮಾಹಿತಿಯನ್ನು ಸಚಿವರಿಗೆ ನೀಡಿದರು.
2008ರಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಸರ್ಕಾರ ಸುಮಾರು 21 ಕೋಟಿ ರೂ.ಗಳಿಗೆ ಅಧಿಕ ಮೊತ್ತ ವ್ಯಯ ಮಾಡಿರುವ ಬಗ್ಗೆ ಮಾಹಿತಿ ಇದೆ. ಈಗಿರುವ ಯಂತ್ರಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆಯೂ ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಇಲ್ಲಿನ ಕಾಮಗಾರಿಯ ಕುರಿತು ಜನರಲ್ಲಿ ಸಾಕಷ್ಟು ದೂರುಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಸ್ಥಗಿತಗೊಂಡ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ಕೊಟ್ಟರು.
ಹೊಳಲೂರಿನ ಪಂಪ್ ಹೌಸ್‌ನಲ್ಲಿ 3 ಮೋಟಾರುಗಳು ಸಕ್ರಿಯವಾಗಿದ್ದು ಅದರಲ್ಲಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತಿವೆ. ಒಂದನ್ನು ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ಊರೊಳಗೆ ಹಾಗೂ ಚಾನಲ್ ಸಮೀಪದಲ್ಲಿರುವ ಶಾಲೆಗೆ ನುಗ್ಗಿ ತೀವ್ರ ತರಹದ ಅಡಚಣೆ ಉಂಟು ಮಾಡುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ ಪಂಪ್ ಹೌಸ್‌ನಿಂದ ಮೇಲೆತ್ತುವ ನೀರು ನಿರೀಕ್ಷೆಯಂತೆ ಸಣ್ಣ ಕೆರೆಗಳಿಗೆ ತಲುಪದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಮೊದಲು ಇಲ್ಲಿನ ಒ೦ದು ಸಣ್ಣ ಕೆರೆಗೆ ನೀರನ್ನು ಭರ್ತಿಗೊಳಿಸಿ, ನಂತರ ಅಗತ್ಯತೆಗಳಿಗೆ ಬಳಸಬೇಕು ಎಂಬ ಅಭಿಪ್ರಾಯವನ್ನು ಜನರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಚಿವರು 2025-26ನೇ ಸಾಲಿನ ಬಜೆಟ್ ಬಗ್ಗೆ ಮಾತನಾಡಿ, "ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 16ನೇ ಜನಪ್ರಿಯ ಬಜೆಟ್ಇದಾಗಿದ್ದು, ರಾಜ್ಯದ ಜನಸಾಮಾನ್ಯರ ನೋವು-ನಲಿವುಗಳನ್ನು ತಿಳಿದು, ಎಲ್ಲ ವರ್ಗದ ಜನರ ಹಿತಕಾಪಾಡುವ ನಿಟ್ಟಿನಲ್ಲಿ ಜನಸ್ನೇಹಿಯಾಗಿದೆ. ಅನ್ನಭಾಗ್ಯ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ಹಣಕಾಸನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಗ್ಯಾರೆಂಟಿ ಯೋಜನೆಯ ಲಾಭವನ್ನು ರಾಜ್ಯದ ಜನರು ಯಾವುದೇ ಮದ್ಯವರ್ತಿಗಳ ಪ್ರವೇಶವಿಲ್ಲದೇ ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.












Click it and Unblock the Notifications