ಶಿವಮೊಗ್ಗ ನಗರದಲ್ಲಿ ತ್ರಿಕೋನ ಸ್ಪರ್ಧೆ; ಗೆಲುವು ಯಾರಿಗೆ?
ಶಿವಮೊಗ್ಗ, ಏಪ್ರಿಲ್ 28; ಈ ಬಾರಿಯ ಚುನಾವಣೆಯ ಸಮಯದಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಸುದ್ದಿಯಾಗಿರುವುದು ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಕಾರಣಕ್ಕೆ. ಟಿಕೆಟ್ ಬೇಡ ಎಂದು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಆದರೆ ಅವರ ಮಗನಿಗೆ ಸಹ ಟಿಕೆಟ್ ಕೈತಪ್ಪಿದ್ದು, ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಬುಡಮೇಲು ಮಾಡಿದೆ.
2023ರ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಹೆಚ್. ಸಿ. ಯೋಗೇಶ್, ಬಿಜೆಪಿಯಿಂದ ಎಸ್. ಎನ್. ಚೆನ್ನಬಸವಪ್ಪ, ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಕೊನೆ ಕ್ಷಣದಲ್ಲಿ ಜೆಡಿಎಸ್ ಸೇರಿ ಕ್ಷೇತ್ರದ ರಾಜಕೀಯ ಚಿತ್ರಣ ಬದಲಿಸಿದ್ದಾರೆ.
ನೇ

ಕ್ಷೇತ್ರದಲ್ಲಿ 5 ಬಾರಿ ಗೆದ್ದಿದ್ದ ಕೆ. ಎಸ್. ಈಶ್ವರಪ್ಪ ಸ್ಪರ್ಧೆ ಮಾಡುತಿಲ್ಲ. ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಬಿಟ್ಟು ಹೆಚ್. ಸಿ. ಯೋಗೇಶ್ ಎಂಬ ಹೊಸ ಮುಖಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಯನೂರು ಮಂಜುನಾಥ್ ಜಿಲ್ಲಾ ರಾಜಕೀಯದ ಹಳೆ ಹುಲಿ. ಆದರೆ ಬಿಜೆಪಿ ಪಕ್ಷದಲ್ಲಿ ಇಲ್ಲ ಎಂಬುದನ್ನು ಗಮನಿಸಬೇಕಿದೆ.
ತ್ರಿಕೋನ ಸ್ಪರ್ಧೆ ನಿರೀಕ್ಷೆ; ರಾಜಕೀಯ ಪಂಡಿತರ ಪ್ರಕಾರ ಶಿವಮೊಗ್ಗ ನಗರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಒಂದು ವೇಳೆ ಬಿಜೆಪಿ ಕೆ. ಎಸ್. ಈಶ್ವರಪ್ಪಗೆ ಟಿಕೆಟ್ ನೀಡಿದ್ದರೆ ಅದರ ಲೆಕ್ಕಾಚಾರವೇ ಬೇರೆಯಾಗಿತ್ತು. ಒಂದು ಸೀಟು ಬಿಜೆಪಿ ಬುಟ್ಟಿಗೆ ಎಂದು ಹೇಳಬಹುದಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಮೂವರ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಈಶ್ವರಪ್ಪ ಇಲ್ಲದ ಬಿಜೆಪಿಗೆ ಜನರು ಮತದಾನ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.

ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಅಂತಹ ಪ್ರಭಾವ ಹೊಂದಿದ್ದಾರೆ ಎಂದೇನಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಗೊಂದಲದಲ್ಲಿ ಅವರು ಸೋತು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 1989, 1994, 2004, 2008, 2018ರಲ್ಲಿ ಈಶ್ವರಪ್ಪ ಗೆದ್ದು ಶಿವಮೊಗ್ಗವನ್ನು ಬಿಜೆಪಿ ಭದ್ರಕೋಟೆ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನ ಕುಮಾರ್ ಗೆದ್ದಿದ್ದರು. ಆದರೆ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಟಿಕೆಟ್ ಹೆಚ್. ಸಿ. ಯೋಗೇಶ್ ಪಾಲಾದ ಮೇಲೆ ಜೆಡಿಎಸ್ ಸೇರಿದ್ದಾರೆ.
ಈ ಬಾರಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್. ಶಿವಮೊಗ್ಗ ಜೆಡಿಎಸ್ ಘಟಕ ಆಯನೂರು ಮಂಜುನಾಥ್, ಕೆ. ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಪ್ರಭಾವದಿಂದ ಬಲಿಷ್ಠವಾಗಿದೆ. ಆದ್ದರಿಂದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಈ ಬಾರಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಬಿಜೆಪಿಯಲ್ಲಿದ್ದ, ಎಂಎಲ್‌ಸಿಯಾಗಿದ್ದ ಆಯನೂರು ಮಂಜುನಾಥ್ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ, ಇದು ಪೈಪೋಟಿ ನೀಡಲು ಸಾಕಾಗಿದೆ.
ಕಾಂಗ್ರೆಸ್ ತಂತ್ರ ಬದಲು; ಶಿವಮೊಗ್ಗ ನಗರ ಬ್ರಾಹ್ಮಣ ಸಮುದಾಯದ ನೆಲೆ ಎಂಬ ಮಾತಿದೆ. ಆದರೆ ಈ ಬಾರಿ ಕಾಂಗ್ರೆಸ್ ತನ್ನ ತಂತ್ರ ಬದಲಿಸಿ ಸಾದರ ಲಿಂಗಾಯತ ಸಮುದಾಯದ ಹೆಚ್. ಸಿ. ಯೋಗೇಶ್ ಎಂಬ ಯುವಕನಿಗೆ ಟಿಕೆಟ್ ನೀಡಿದೆ. 1999ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದಿದ್ದ ಎಚ್. ಎಂ. ಚಂದ್ರಶೇಖರಪ್ಪ 2004ರಲ್ಲಿ ಸೋತಿದ್ದರು. ಅವರ ಪುತ್ರ ಯೋಗೇಶ್ ಈ ಬಾರಿಯ ಚುನಾವಣೆಗೆ ಪಕ್ಷದ ಅಭ್ಯರ್ಥಿ. ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಬ್ರಾಹ್ಮಣ ಸಮುದಾಯದ ನಾಯಕರಾಗಿದ್ದರು. ಅವರಿಗೆ ಟಿಕೆಟ್ ನೀಡದಿರುವುದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications