ಶಿವಮೊಗ್ಗ: ಜೂ. 4ರಂದು ಮತ ಎಣಿಕೆ, ವಾಹನ ಸಂಚಾರ ಮಾರ್ಗ ಬದಲು
ಶಿವಮೊಗ್ಗ, ಮೇ 30: ಲೋಕಸಭೆ ಚುನಾವಣೆ 2024ರ ಫಲಿತಾಂಶ ಜೂನ್ 4ರ ಮಂಗಳವಾರ ನಡೆಯಲಿದೆ. ಜಿಲ್ಲಾಡಳಿತಗಳು ಮತ ಎಣಿಕೆಗೆ ಅಗತ್ಯ ಸಿದ್ಧತೆ, ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿವೆ.
ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್ 4ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ. ಆದ್ದರಿಂದ ಸಾರ್ವಜನಿಕರ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ವಾಹನ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಹಾಗೂ ವಾಹನಗಳ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ. ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳ ವಿವರ
* ಬೆಂಗಳೂರು, ಭದ್ರಾವತಿ, ಎನ್. ಆರ್. ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‍ಗಳು ಹಾಗೂ ಕಾರು, ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು.
* ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬಂದು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಬಿ. ಹೆಚ್. ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಹೋಗುವುದು.
* ಹೊನ್ನಾಳಿ ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‍ಗಳನ್ನು 100 ಅಡಿ ರಸ್ತೆ, ವಿನೋಬನಗರ ಮಾರ್ಗವಾಗಿ ಹೋಗುವುದು.
* ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‍ಗಳು ಎ. ಎ. ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು.
* ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್. ಆರ್. ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂ. ಆರ್. ಎಸ್. ಸರ್ಕಲ್ ಕಡೆಗೆ ಹೋಗುವುದು.
ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ.
ಇನ್ನು ಮತ ಎಣಿಕೆಗೆ ಆಗಮಿಸುವ ವಿವಿಧ ಪಕ್ಷಗಳ ಏಜೆಂಟರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳ ವಾಹನಗಳ ನಿಲುಗಡೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು ಮತ್ತು ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು ಬಿ. ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ಅನುಮತಿಸಿದೆ.
ಎಂ. ಆರ್. ಎಸ್. ಸರ್ಕಲ್‍ನ ಹತ್ತಿರವಿರುವ ಕೆಇಬಿ ಸಮುದಾಯ ಭವನದ ಹಿಂಭಾಗ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಸಾರ್ವಜನಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆ ಎಂ. ಆರ್. ಎಸ್. ನಿಂದ ಎನ್. ಆರ್. ಪುರ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡುವುದು.
ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ವೇಡಿಯಂ ಹತ್ತಿರ ಸಾರ್ವಜನಿಕರ ಎಲ್ಲಾ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಎಂ. ಆರ್. ಎಸ್. ಸರ್ಕಲ್‍ನಿಂದ ಬಿ. ಹೆಚ್. ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್‍ವರೆಗೆ ಸಾರ್ವಜನಿಕರ ವಾಹನಗಳು ಒಡಾಡದಂತೆ ನಿಷೇಧಿಸಿದೆ.
ಕುತೂಹಲ ಮೂಡಿಸಿದ ಫಲಿತಾಂಶ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಮೇ 7ರಂದು ಕ್ಷೇತ್ರದಲ್ಲಿ ಶೇ 78.33ರಷ್ಟು ಮತದಾನವಾಗಿತ್ತು, ಜೂನ್ 4ರಂದು ಮತ ಎಣಿಕೆ ನಡೆಯುತ್ತಿದೆ.
ಚುನಾವಣೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ, ಶಿವಮೊಗ್ಗದ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ.












Click it and Unblock the Notifications