ಗೋಳಿಗರಡಿ ಜಾತ್ರೆ ಮುಗಿಸಿ ಬರುವಾಗ ಭೀಕರ ಅಪಘಾತ: 12 ಮಂದಿ ಸ್ಥಿತಿ ಗಂಭೀರ
ಶಿವಮೊಗ್ಗ, ಫೆಬ್ರವರಿ 23: ಗೋಳಿಗರಡಿ ಜಾತ್ರೆ ಮುಗಿಸಿ ವಾಪಸ್ ಆಗುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ಬಳಿ ನಡೆದಿದೆ. ಟಿಪ್ಪರ್ ಲಾರಿ ಮತ್ತು ಓಮಿನಿ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಹೊಸನಗರದಿಂದ ಶಿವಮೊಗ್ಗ ಮಾರ್ಗದ ಕಡೆ ತೆರಳುತ್ತಿದ್ದ ಓಮಿನಿ ಕಾರು ಹಾಗೂ ಅದೇ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟಿಪ್ಪರ್ ಲಾರಿ ಎರಡು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ 6 ಮಕ್ಕಳು ಸೇರಿದಂತೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳೆಲ್ಲ ಹೊಸನಗರದ ಕೊಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರಕ್ಕಿ ಬಳಿಯ ಬುಲ್ಡೋಜರ್ ಗುಡ್ಡದ ನಿವಾಸಿಗಳಾಗಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಗಾಯಾಳುಗಳು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಗೋಳಿಗರಡಿ ದೇವಸ್ಥಾನಕ್ಕೆ ತೆರಳಿ ವಾಪಸ್ ಆಗುವ ವೇಳೆ ಅಪಘಾತ ಸಂಭವಿಸಿದೆ.
ಭೀಕರ ಅಪಘಾತ ಸಂಭವಿಸುತ್ತಿದ್ದಂತೆ ಗಾಯಾಳುಗಳನ್ನು ರಕ್ಷಿಸಿ ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓಮಿನಿ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಅಂಧ ದಂಪತಿ ಸಾವು
ರಸ್ತೆ ದಾಟುತ್ತಿದ್ದ ಅಂಧ ದಂಪತಿ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಶ್ರೀಧರ್ (52) ಹಾಗೂ ಅರ್ಚನಾ(35) ಮೃತ ಅಂಧ ದಂಪತಿ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರನಿಗೂ ಕೂಡ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications