ಶಿವಮೊಗ್ಗ: ಯುವಕನ ಮೇಲೆ ಹಲ್ಲೆ; ಮೂವರು ಆರೋಪಿಗಳ ಬಂಧನ
ಶಿವಮೊಗ್ಗ, ಅಕ್ಟೋಬರ್ 26: ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾದ ಯುವಕರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಮಾರ್ಕೆಟ್ ಫೌಜಾನ್, ಅಜರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತ ಆರೋಪಿಗಳು. ಕಿಡಿಗೇಡಿಗಳು ಸೋಮವಾರ ರಾತ್ರಿ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನ ತಲೆಗೆ ಕಲ್ಲು ಹೊಡೆದು, ಅವಾಚ್ಯ ಶಬ್ದಗಳನ್ನು ಕೂಗುತ್ತ ಬೈಕಿನಲ್ಲಿ ಪರಾರಿಯಾಗಿದ್ದರು. ಕಿಡಿಗೇಡಿಗಳ ಅಸಭ್ಯ ವರ್ತನೆಯ ಕುರಿತು ಬೆನ್ನಿಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರಿನ ಆಧಾರದ ಮೇಲೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ತಲೆ ಮರೆಸಿಕೊಂಡಿದ್ದು ಅವರ ಪತ್ತೆ ಶೋಧ ಕಾರ್ಯ ಆರಂಭವಾಗಿದೆ.

ಆರೋಪಿಗಳು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದೇಕೆ?
ಬರ್ಮಪ್ಪ ನಗರದ ಪ್ರಕಾಶ್ (25) ತಲೆಗೆ ಕಲ್ಲು ಹೊಡೆದು ಮೂವರು ಆರೋಪಿಗಳು ಪರಾರಿಯಾಗಿದ್ದರು. ಕಿಗಿಗೇಡಿಗಳ ಕೃತ್ಯದಿಂದ ಗಂಭೀರ ಗಾಯಗೊಂಡಿದ್ದ ಪ್ರಕಾಶ್‌ನನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಘಟನೆಯಿಂದ ಬರ್ಮಪ್ಪ ನಗರದ
ಸೀಗೆಹಟ್ಟಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ವಿಚಾರಣೆ ವೇಳೆ ಹಲ್ಲೆಗೆ ಕಾರಣ ಬಾಯ್ಬಿಟ್ಟಿದ್ದಾರೆ. ಆರೋಪಿಗಳಾದಫೌಜಾನ್, ಅಜರ್ ಅಲಿಯಾಸ್ ಅಜ್ಜು, ಫರಾಜ್ ಹಾಗೂ ಇನ್ನಿಬ್ಬರು ಎರಡು ಬೈಕುಗಳಲ್ಲಿ ಸೋಮವಾರ ರಾತ್ರಿ 11 ಗಂಟೆಗೆ ಸೀಗೆಹಟ್ಟಿಗೆ ತೆರಳಿದ್ದರು.
ಪ್ರವೀಣ್ ಅಲಿಯಾಸ್ ಕುಲ್ಡಾ ಪ್ರವೀಣ್ ಎಂಬಾತನ ವಿರುದ್ಧ ಅವಾಚ್ಯ ಶಬ್ದಗಳನ್ನು ಕೂಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇಬ್ಬರು ಕ್ಲಾರ್ಕ್ ಪೇಟೆಯಲ್ಲಿ ಬಿಟ್ಟು ಮಾರ್ಕೆಟ್ ಫೌಜಾನ್, ಅಜರ್, ಫರಾಜ್ ಕೂಡಲೆ ಭರ್ಮಪ್ಪ ನಗರಕ್ಕೆ ಬಂದಿದ್ದಾರೆ. ಪ್ರಕಾಶ್ ವಿರುದ್ಧ ಜೋರಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತ ಎದುರಿಗೆ ಸಿಗುತ್ತಿದ್ದಂತೆ ಕಲ್ಲಿನಿಂದ ಹೊಡೆದಿದ್ದಾರೆ.

ಕೆಲವು ದಿನದ ಹಿಂದೆ ಪ್ರಕಾಶ್ ಎಂಬಾತ ಮಾರ್ಕೆಟ್ ಫೌಜಾನ್‌ನನ್ನು ನಿಂದಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿಗಳು ಪ್ರಕಾಶ್ ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ತೆರಳಿದ್ದರು. ಈ ವೇಳೆ ಆತನನ್ನು ನೋಡುತ್ತಿದ್ದಂತೆ ಸಿಟ್ಟಿಗೆದ್ದ ಆರೋಪಿಗಳು ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications