ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ
ಶಿವಮೊಗ್ಗ, ಫೆಬ್ರವರಿ 11; ರೈಲ್ವೆ ಮಂಡಳಿ ಶಿವಮೊಗ್ಗದ ತಾಳಗುಪ್ಪ ಮತ್ತು ಹುಬ್ಬಳ್ಳಿ ನಡುವಿನ ನೂತನ ರೈಲು ಮಾರ್ಗದ ವರದಿ ಕಳಿಸುವಂತೆ ನೈಋತ್ಯ ರೈಲ್ವೆಗೆ ಸೂಚನೆ ನೀಡಿದೆ. ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ.
ನೈಋತ್ಯ ರೈಲ್ವೆ ವಲಯವು ಈಗಾಗಲೇ ಈ ಮಾರ್ಗದ ಸಮೀಕ್ಷೆಯನ್ನು ಕೈಗೊಂಡಿದೆ. ಎರಡು ತಿಂಗಳಿನಲ್ಲಿ ಅದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವರದಿ ಪೂರ್ಣಗೊಂಡ ಬಳಿಕ ಅದನ್ನು ರೈಲ್ವೆ ಮಂಡಳಿಗೆ ಕಳಿಸಲಾಗುತ್ತದೆ. ಸುಧಾರಿತ ತಂತ್ರಜ್ಞಾನ ಆಧಾರಿತ ಡ್ರೋನ್ ಸಮೀಕ್ಷೆ ಕಾರ್ಯ ನಡೆಯುತ್ತಿದೆ.
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವಿನ ಸುಮಾರು 158 ಕಿ. ಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದರೆ. ನೈಋತ್ಯ ರೈಲ್ವೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದೆ. ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ.
ಬೆಂಗಳೂರು ಮತ್ತು ಮೈಸೂರು ನಗರದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ತನಕ ರೈಲುಗಳು ಸಂಚಾರ ನಡೆಸುತ್ತದೆ. ಪ್ರಸ್ತಾವಿತ ರೈಲು ಮಾರ್ಗ ನಿರ್ಮಾಣಗೊಂಡರೆ ಉತ್ತರ ಕನ್ನಡದ ಜೊತೆ ಉತ್ತರ ಕರ್ನಾಟಕಕ್ಕೆ ಸಹ ಶಿವಮೊಗ್ಗದಿಂದ ರೈಲು ಸಂಪರ್ಕ ಸಿಗಲಿದೆ.

ವಿವಿಧ ಮಾರ್ಗಗಳ ವಿವರಗಳು
ಕೊಪ್ಪಳ-ಸಿಂಧನೂರು, ಕೊಲ್ಲಾಪುರ-ಧಾರವಾಡ, ಆಲಮಟ್ಟಿ-ಕೊಪ್ಪಳ, ಹಿಂದುಪುರ-ಚಿತ್ರದುರ್ಗ, ಚಿತ್ರದುರ್ಗ-ಆಲಮಟ್ಟಿ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ, ಗದಗ-ಕೃಷ್ಣಾ ಸೇರಿವಂತೆ ಎಲ್ಲಾ ಮಾರ್ಗದ ವರದಿಯನ್ನು ಕಳೆದ ವರ್ಷವೇ ರೈಲ್ವೆ ಮಂಡಳಿ ಕೇಳಿತ್ತು.
ಚಿತ್ರದುರ್ಗ-ಹಿಂದುಪುರ (132 ಕಿ. ಮೀ.) ಮತ್ತು ಗದಗ-ಕೃಷ್ಣಾ (221 ಕಿ. ಮೀ.) ಎರಡೂ ಮಾರ್ಗಗಳು ಆರ್ಥಿಕವಾಗಿ ಹೊರೆ ಎಂಬ ಕಾರಣಕ್ಕೆ ರೈಲ್ವೆ ಮಂಡಳಿ ಪ್ರಸ್ತಾವನೆ ಕೈ ಬಿಟ್ಟಿದೆ. ಉಳಿದ ಮಾರ್ಗಗಳ ಸಮೀಕ್ಷೆ ಕಾರ್ಯಗಳು ವಿವಿಧ ಹಂತಗಳಲ್ಲಿವೆ. ಎಲ್ಲಾ ಅಂಶಗಳನ್ನು ಒಳಗೊಂಡ ಸಮೀಕ್ಷೆ ನಡೆಸಿ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತದೆ.

2020ರಲ್ಲಿ ಒಪ್ಪಿಗೆ ಸಿಕ್ಕಿತ್ತು
ಶಿವಮೊಗ್ಗ ಜಿಲ್ಲೆಯ ತಾಳಗುಪ್ಪರಿಂದ ಉತ್ತರ ಕನ್ನಡದ ಜಿಲ್ಲೆಯ ಶಿರಸಿ ಮಾರ್ಗವಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ ಸಂಪರ್ಕಿಸುವ ನೂತನ ರೈಲು ಮಾರ್ಗದ ಸಮೀಕ್ಷೆಗೆ 2020ರ ಅಕ್ಟೋಬರ್‌ನಲ್ಲಿಯೇ ಒಪ್ಪಿಗೆ ಸಿಕ್ಕಿತ್ತು. ಶಿರಸಿ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.
ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ಬೇಡಿಕೆಯಾಗಿತ್ತು ಎಂದು ಹೇಳಿದ್ದರು. ಸುಧಾರಿತ ತಂತ್ರಜ್ಞಾನ ಆಧಾರಿತ ಡ್ರೋನ್ ಸಮೀಕ್ಷೆ ಕಾರ್ಯ ನಡೆಸಲು ಟೆಂಡರ್ ಪ್ರಕ್ರಿಯೆ ಸಹ ಆರಂಭವಾಗಿತ್ತು.

ಸುರೇಶ್ ಅಂಗಡಿಗೆ ಮನವಿ ಸಲ್ಲಿಸಲಾಗಿತ್ತು
ಪ್ರಧಾನಿ ಮೋದಿ ಸಂಪುಟದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿಗೆ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಪ್ರಸ್ತಾವನೆಯ ಅನ್ವಯ ಪಿ. ಇ. ಟಿ. ಸರ್ವೇ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿತ್ತು.
ಈ ಮಾರ್ಗ ನಿರ್ಮಾಣಗೊಂಡರೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ಬೆಂಗಳೂರಿನಿಂದ ತಾಳಗುಪ್ಪ ತನಕ ಈಗ ರೈಲು ಸಂಚಾರ ನಡೆಸುತ್ತದೆ. ಈ ಮಾರ್ಗ ನಿರ್ಮಾಣವಾದರೆ ಉತ್ತರ ಕನ್ನಡದ ಮೂಲಕ ರೈಲು ಹುಬ್ಬಳ್ಳಿಗೆ ತಲುಪಬಹುದು.

2 ನೇ ಬಾರಿ ಅನುದಾನ ಮಂಜೂರು
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ಹೊಸ ಬೇಡಿಕೆಯಲ್ಲ. ಹಿಂದಯೇ ಬೇಡಿಕೆ ಕೇಳಿ ಬಂದಾಗ ಸಮೀಕ್ಷೆಗೆ ಅನುದಾನ ಮಂಜೂರಾಗಿತ್ತು. ಆದರೆ ಅನುದಾನ ವಾಪಸ್ ಹೋಗಿತ್ತು. ಈಗ ರೈಲು ಇಲಾಖೆ 79 ಲಕ್ಷ ರೂ. ಅನುದಾನ ಮಂಜೂರು ಮಾಡಿ ಮಾರ್ಗದ ಸಮೀಕ್ಷೆ ಕಾರ್ಯವನ್ನು ಮತ್ತೆ ಕೈಗೊಂಡಿದೆ.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಸಹ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು ಯೋಜನೆಗೆ ಭೂ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ.












Click it and Unblock the Notifications