ಶಿವಮೊಗ್ಗ; ಮತ್ತೆ ಕಲ್ಲು ತೂರಾಟ, ಬಿಗಿ ಪೊಲೀಸ್ ಬಂದೋಬಸ್ತ್
ಶಿವಮೊಗ್ಗ, ಫೆಬ್ರವರಿ 20; ಶಿವಮೊಗ್ಗ ನಗರದಲ್ಲಿ ಭಾನುವಾರ ರಾತ್ರಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅಂತ್ಯಕ್ರಿಯೆ ರೋಟರಿ ಚಿತಾಗಾರದಲ್ಲಿ ನಡೆಯಿತು. ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಮತ್ತೆ ಬಿ. ಎಚ್. ರಸ್ತೆಯಲ್ಲಿ ಕಲ್ಲು ತೂರಾಟ ನಡೆದಿದೆ.
ಸೋಮವಾರ ಮಧ್ಯಾಹ್ನ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರು ಸಿದ್ದಯ್ಯ ರಸ್ತೆಯಲ್ಲಿ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿ. ಎಚ್. ರಸ್ತೆಯಲ್ಲಿಯೂ ಮೆರವಣಿಗೆ ಸಾಗುವಾಗ ಹೊಳೆ ಬಸ್ ನಿಲ್ದಾಣದ ಬಳಿ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಕಬ್ಬಿನ ಹಾಲು ತಯಾರು ಮಾಡುವ ಗಾಡಿಯನ್ನು ತುಂಗಾ ನದಿಗೆ ಸೇತುವೆ ಮೇಲಿನಿಂದ ಹಾಕಲಾಯಿತು.

ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ, ಲಾಠಿ ಬೀಸಿ ಉದ್ರಿಕ್ತರನ್ನು ಚದುರಿಸಿದರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರ ತಲುಪಿತು. ಮರಾಠ ಭಾವಸಾರ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಿತು.
ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಕುಟುಂಬಸ್ಥರು ಆಕ್ರಂದನದ ನಡುವೆಯೇ ಹರ್ಷ ಶವಕ್ಕೆ ಪೂಜೆ ಸಲ್ಲಿಕೆ ಮಾಡಿದರು. ಹರ್ಷ ತಂದೆ ನಾಗರಾಜ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಐಜಿಪಿ ಮುರಗನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬೆಂಗಳೂರಿನಿಂದ 212 ಪೊಲೀಸರನ್ನು ಕಳುಹಿಸಲಾಗಿದೆ.
We have instructed police officials to analyse the situation and maintain law & order; have to take care for 2-3 days: Karnataka Home Minister Araga Jnanendra on violence breaking out in view of the murder of Bajrang Dal activist Harsha
— ANI (@ANI) February 21, 2022
Visuals from Shivamogga, earlier today. pic.twitter.com/8Xgby4Ol2c
ಮುಖ್ಯಮಂತ್ರಿಗಳ ಭೇಟಿ; ಇನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಶಿವಮೊಗ್ಗ ನಗರದ ಪರಿಸ್ಥಿತಿ ಕುರಿತು ವಿವರ ನೀಡಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರಗ ಜ್ಞಾನೇಂದ್ರ, "ಪರಿಸ್ಥಿತಿ ವಿಶ್ಲೇಷಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ. ಬೆಂಗಳೂರಿನಿಂದ ಸಹ ಪೊಲೀಸರನ್ನು ಕಳುಹಿಸಲಾಗಿದೆ" ಎಂದರು.
"ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 3 ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಐವರು ಭಾಗಿಯಾಗಿರುವ ಮಾಹಿತಿ ಇದೆ" ಎಂದು ಆರಗ ಜ್ಞಾನೇಂದ್ರ ಹೇಳಿದರು.
ಎಫ್ಐಆರ್ ದಾಖಲು; ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹರ್ಷನಿಗೆ ಜೀವ ಬೆದರಿಕೆ ಇತ್ತು ಎಂಬ ಮಾಹಿತಿ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ 8.45 ರಿಂದ 8.50ರ ನಡುವೆ ಹರ್ಷ ಮೇಲೆ ಹಲ್ಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಕಾರಿನಲ್ಲಿ ಬಂದ ನಾಲ್ವರು ಹಲ್ಲೆ ಮಾಡಿದ್ದು, ಆಟೋದಲ್ಲಿ ಬಂದ ವ್ಯಕ್ತಿ ಮಾರಕಾಸ್ತ್ರಗಳನ್ನು ತಂದಿದ್ದ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಹತ್ಯೆ ಪ್ರಕರಣದಲ್ಲಿ ಐವರು ಭಾಗಿಯಾಗಿದ್ದಾರೆ ಎಂಬ ಶಂಕೆ ಇದೆ.
Recommended Video
ಘಟನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ, "ರಾಷ್ಟ್ರ ವಿರೋಧಿಗಳು, ಹಿಂದೂ ವಿರೋಧಿ ಸಂಘಟನೆಗಳು ಹರ್ಷ ಕೊಲೆ ಮಾಡಿದ್ದಾರೆ. ಆತನೊಬ್ಬ ಹಿಂದೂ, ದೇಶಭಕ್ತ ಎಂಬ ಕಾರಣಕ್ಕೆ ಅಂತರಾಷ್ಟ್ರೀಯ ಸಮುದಾಯದ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ" ಎಂದು ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಶಿವಮೊಗ್ಗ ಘಟನೆ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿವೆ" ಎಂದು ತಿಳಿಸಿದ್ದಾರೆ.












Click it and Unblock the Notifications