• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವರ್ಕರ್ ಫ್ಲೆಕ್ಸ್ ವಿವಾದದಿಂದ ಕೋಟಿ ಕೋಟಿ ನಷ್ಟ, 'ಬ್ರ್ಯಾಂಡ್ ಶಿವಮೊಗ್ಗ'ಕ್ಕೆ ಕಪ್ಪು ಚುಕ್ಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 17: ಸಾವರ್ಕರ್ ಫೋಟೊ ವಿವಾದ ಶಿವಮೊಗ್ಗ ನಗರದಲ್ಲಿ ಎರಡು ದಿನದ ವ್ಯಾಪಾರ ವಹಿವಾಟನ್ನು ಕಸಿದುಕೊಂಡಿದೆ. ಇದರಿಂದ ಕೋಟ್ಯಂತರ ರೂ. ನಷ್ಟವನ್ನು ಉಂಟ ಮಾಡಿದೆ. ಇನ್ನೂ ಹಲವರ ತುತ್ತು ಚೀಲಕ್ಕೂ ಕುತ್ತು ತಂದಿದೆ.

ಆಗಸ್ಟ್‌ 15ರಂದು ಮಧ್ಯಾಹ್ನ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಸಾವರ್ಕರ್‌ ಫೋಟೋ ವಿಚಾರವಾಗಿ ಎರಡು ಸಮುದಾಯಗಳ ನಡುವೆ ನಡೆದ ವಾಗ್ವಾದದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ತಕ್ಷಣದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಪರಿಣಾಮ ಇದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.

ವಿಡಿ ಸಾವರ್ಕರ್ ಬಗ್ಗೆ ಇರುವ ತಗಾದೆ, ಆಕ್ಷೇಪಗಳೇನು?ವಿಡಿ ಸಾವರ್ಕರ್ ಬಗ್ಗೆ ಇರುವ ತಗಾದೆ, ಆಕ್ಷೇಪಗಳೇನು?

ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್. ಸುಮಾರು 500 ಮಳಿಗೆಗಳು ಇಲ್ಲಿದ್ದು, ನಗರದ ಒಟ್ಟು ವಹಿವಾಟಿನ ಶೇ.40ರಷ್ಟು ಪಾಲು ವ್ಯಾಪಾರ ಗಾಂಧಿ ಬಜಾರ್ ನಲ್ಲಿ ನಡೆಯುತ್ತದೆ. ದಿನಸಿ, ಜವಳಿ, ಆಭರಣ, ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲಾ ಬಗೆಯ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಇಲ್ಲಿದ್ದಾರೆ.

ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧ ರಿಟೇಲ್ ವ್ಯಾಪಾರಿಗಳಿಗೆ ಗಾಂಧಿ ಬಜಾರ್ ಹೋಲ್ ಸೇಲ್ ಅಂಗಡಿಗಳೆ ಆಧಾರ. ಗಾಂಧಿ ಬಜಾರ್ ಬಂದ್ ಆದರೆ ನಗರದಾದ್ಯಂತ ವಹಿವಾಟಿನ ಮೇಲೆ ಪರಿಣಾಮ ಉಂಟಾಗಲಿದೆ. ಕಳೆದ ಫೆಬ್ರವರಿಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಒಂದು ವಾರಕ್ಕೂ ಹೆಚ್ಚು ಕಾಲ ಗಾಂಧಿ ಬಜಾರ್ ಬಂದ್ ಆಗಿತ್ತು. ಈಗ ಫ್ಲೆಕ್ಸ್ ವಿವಾದದಿಂದ ಪುನಃ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಗಾಂಧಿ ಬಜಾರ್ ವ್ಯಾಪರಸ್ಥರಿಗೆ ಕೋಟ್ಯಂತರ ರೂ. ನಷ್ಟವಾಗಿದೆ.

 ವ್ಯಾಪಾರಿಗಳು ಹೈರಾಣ

ವ್ಯಾಪಾರಿಗಳು ಹೈರಾಣ

ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಕೂಡ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಇಲ್ಲಿಯು ವ್ಯಾಪಾರ, ವಹಿವಾಟು ಬಿರುಸಾಗಿ ನಡೆಯುತ್ತಿತ್ತು. ಅಮೀರ್ ಅಹಮದ್ ಸರ್ಕಲ್ ಗೆ ಹೊಂದಿಕೊಂಡ ಹಾಗೆ ಬಿ.ಹೆಚ್.ರಸ್ತೆ, ನೆಹರೂ ರಸ್ತೆಗಳಿವೆ. ಸಂಜೆ ವೇಳೆಗೆ ಇಲ್ಲಿ ವ್ಯಾಪಾರ ಬಿರುಸು ಪಡೆಯುತ್ತದೆ. ಆದರೆ ಫ್ಲೆಕ್ಸ್ ವಿವಾದದಿಂದಾಗಿ ಇವೆರಡೂ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇತ್ತ ದುರ್ಗಿಗುಡಿಯಲ್ಲಿಯು ವ್ಯಾಪಾರ ಕುಂಟಿತವಾಗಿದೆ.

 ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ

ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ

ಸುತ್ತಮುತ್ತಲ ಹಲವು ತಾಲೂಕುಗಳಿಗೆ ಶಿವಮೊಗ್ಗ ನಗರವೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಎನ್.ಆರ್.ಪುರ, ಶೃಂಗೇರಿ, ಹಾವೇರಿ, ಹೊನ್ನಾಳಿ, ಚನ್ನಗಿರಿ ಸೇರಿದಂತೆ ಹಲವು ತಾಲೂಕಿನ ಜನರು ಶಿವಮೊಗ್ಗ ನಗರದೊಂದಿಗೆ ವ್ಯಾವಹಾರಿಕ ನಂಟು ಹೊಂದಿದ್ದಾರೆ. ಕೋವಿಡ್ ಲಾಕ್ ಡೌನ್ ನಂತರ ದೊಡ್ಡ ಪ್ರಮಾಣದ ಗ್ರಾಹಕರು ಬೇರೆ ದೊಡ್ಡ ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಶಿವಮೊಗ್ಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು, ಪದೇ ಪದೆ ಗಲಭೆಗಳು ಆಗುತ್ತಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ವರ್ತಕರಿಗೆ ಎದುರಾಗಿದೆ.

'"ಸಣ್ಣ ಪುಟ್ಟ ವ್ಯವಹಾರಕ್ಕೂ ಬೇರೆ ಜಿಲ್ಲೆಗಳ ಜನರು ಪ್ರತಿ ದಿನ ಶಿವಮೊಗ್ಗಕ್ಕೆ ಬರುತ್ತಿದ್ದರು. ಈಗ ಅವರೆಲ್ಲ ಇಲ್ಲಿಗೆ ಬರಲು ಆತಂಕ ಪಡುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ವ್ಯಾವಹಾರ ನಡೆಸುತ್ತಾರೆ ಅಥವಾ ಬೇರೆ ಜಿಲ್ಲೆಯ ಮಾರುಕಟ್ಟೆಗಳತ್ತ ಹೋಗುತ್ತಾರೆ. ನಾವು ಕೋಟ್ಯಂತರ ರೂ. ಬಂಡವಾಳ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದೇವೆ. ಇದು ನಮಗೆ ಬಹಳ ಆತಂಕ ಮೂಡಿಸುತ್ತಿದೆ" ಎನ್ನುತ್ತಾರೆ ಶಿವಮೊಗ್ಗ ನಗರ ಚಿನ್ನಾಭರಣ ವರ್ತಕರ ಸಂಘದ ಉಪಾಧ್ಯಕ್ಷ ಗಿರೀಶ್.

 ಬ್ರಾಂಡ್ ಉಳಿಸುವ ಕೆಲಸ ಮಾಡಬೇಕು

ಬ್ರಾಂಡ್ ಉಳಿಸುವ ಕೆಲಸ ಮಾಡಬೇಕು

ಫ್ಲೆಕ್ಸ್ ವಿವಾದದಿಂದ ಶಿವಮೊಗ್ಗದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆವರೆಗೆ ವ್ಯಾಪಾರ ನಡೆಸಲು ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಪೊಲೀಸರು ಕೆಲವು ಕಡೆ ಮಧ್ಯಾಹ್ನದ ವೇಳೆಗೆ ಅಂಗಡಿ ಬಂದ್ ಮಾಡಿಸುತ್ತಿದ್ದಾರೆ. ಹಾಗಾಗಿ ನಿಷೇಧಾಜ್ಞೆ ತೆರವಾಗುವವರೆಗೆ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳುವುದಿಲ್ಲ. ಒಂದು ವಾರದ ವಾರದ ವರೆಗೆ ಪರಿಣಾಮ ಉಂಟಾಗಲಿದೆ.

" ಪದೇ ಪದೆ ಈ ರೀತಿ ಗಲಭೆಗಳಾದರೆ ಬ್ರಾಂಡ್ ಶಿವಮೊಗ್ಗಕ್ಕೆ ಬಹಳ ದೊಡ್ಡ ಪೆಟ್ಟು ಬೀಳಲಿದೆ. ವ್ಯಾಪಾರ - ವಹಿವಾಟಿಗೆ ತೊಂದರೆಯಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು, ಸರ್ವ ಧರ್ಮದ ಮುಖಂಡರು, ಪೊಲೀಸರು ಸಭೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಶಿವಮೊಗ್ಗದ ಬ್ರಾಂಡ್ ಉಳಿಸುವ ಕೆಲಸ ಮಾಡಬೇಕು" ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ತಿಳಿಸಿದ್ದಾರೆ.

 ಕೋಟ್ಯಂತರ ರೂ ನಷ್ಟ

ಕೋಟ್ಯಂತರ ರೂ ನಷ್ಟ

ಶಿವಮೊಗ್ಗ ನಗರದಲ್ಲಿ ನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಅಂದಾಜು ಪ್ರಕಾರ ಪ್ರತಿ ತಿಂಗಳು 300 ಕೋಟಿ ರೂ.ಗು ಹೆಚ್ಚು ವ್ಯಾಪಾರವಾಗುತ್ತದೆ. ಕೋವಿಡ್ ಸಂದರ್ಭ ಎರಡು ವರ್ಷ ವರ್ತಕರು ಸಂಕಷ್ಟಕ್ಕೀಡಾಗಿದ್ದರು. ಆ ಬಳಿಕ ಗಲಭೆಗಳು ವರ್ತಕರನ್ನು ಹೈರಾಣಾಗಿಸಿದೆ. ನಗರದ ವರ್ತಕರು ನಷ್ಟ ಅನುಭವಿಸುತ್ತಿದ್ದು, ಹಲವು ಮಳಿಗೆಗಳನ್ನು ಬಂದ್ ಮಾಡುವ ಹಂತಕ್ಕೆ ತಲುಪಿದೆ. ಇದು ಶಿವಮೊಗ್ಗ ನಗರದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವ ಸಾದ್ಯತೆ ಇದೆ.

English summary
Shivamogga traders loses crores of revenue due to 144 imposed in the shivamogga after the Savarkar flex dispute,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X