ಶಿವಮೊಗ್ಗ ಲೋಕಸಭೆ ಚುನಾವಣೆ 2024 ಫಲಿತಾಂಶ : ಯಾರಿಗೆ ಗೆಲುವು?
ಶಿವಮೊಗ್ಗ, ಮೇ 26: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಮೇ 7ರಂದು ಶಿವಮೊಗ್ಗ ಕ್ಷೇತ್ರದಲ್ಲಿ ಶೇ 78.33ರಷ್ಟು ಮತದಾನವಾಗಿದೆ. ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಚುನಾವಣೆಯಲ್ಲಿ ಗೆಲುವು ಯಾರಿಗೆ? ಎಂಬ ಲೆಕ್ಕಾಚಾರ ಜೋರಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಎಂದರೆ ಅದು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಎಸ್. ಬಂಗಾರಪ್ಪ ಕುಟುಂಬದ ನಡುವಿನ ಹೋರಾಟವಾಗುತ್ತಿದೆ. ಆದರೆ ಈ ಬಾರಿ ಈ ಚಿತ್ರಣ ಬದಲಾಯಿಸಿದ್ದು, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ.

ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ, ಶಿವಮೊಗ್ಗದ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಎದುರಾಳಿ. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ.
ಚುನಾವಣೆಯಲ್ಲಿ ಅಡಗಿದೆ ಪ್ರತಿಷ್ಠೆ: ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬಳಿಕ, ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಬಿಜೆಪಿಯ ಪ್ರತಿಷ್ಠೆ ಅಡಗಿದೆ.
ಬಿ. ವೈ. ವಿಜಯೇಂದ್ರ ಸಹೋದರ ಬಿ. ವೈ. ರಾಘವೇಂದ್ರ ಕಣದಲ್ಲಿ ಇರುವುದರಿಂದ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಂಡು ಬರುವುದು ರಾಜ್ಯಾಧ್ಯಕ್ಷರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆದ್ದರಿಂದ ಶಿವಮೊಗ್ಗದ ಫಲಿತಾಂಶದ ಮೇಲೆ ರಾಜ್ಯದ ಜನರ ಕಣ್ಣಿದೆ.
ಸೊರಬದ ಶಾಸಕ, ಸಚಿವ ಮಧು ಬಂಗಾರಪ್ಪ ಅವರಿಗೂ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. 2009ರ ಲೋಕಸಭೆ ಚುನಾವಣೆ ಬಳಿಕ ಪ್ರತಿ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವೆ ಹೋರಾಟ ನಡೆಯುತ್ತಿದೆ. ಪ್ರತಿ ಬಾರಿಯೂ ಬಂಗಾರಪ್ಪ ಕುಟುಂಬಕ್ಕೆ ಸೋಲಾಗುತ್ತಿದೆ. ಈ ಬಾರಿ ಸಚಿವರಾಗಿರುವ ಮಧು ಬಂಗಾರಪ್ಪ ಸಹೋದರಿ ಗೆಲ್ಲಿಸಿಕೊಂಡು ಬರುವ ಪಣತೊಟ್ಟು ಚುನಾವಣಾ ಪ್ರಚಾರ ನಡೆಸಿದ್ದಾರೆ.
ಈ ನಡುವೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹಾವೇರಿಯಲ್ಲಿ ಪುತ್ರ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಟೀಕೆ ಮಾಡಿ, ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿಯಿಂದ ಉಚ್ಛಾಟನೆಗೊಂಡರು. ಯಾರ ಮನವೊಲಿಕೆಗೂ ಸಹ ಬಗ್ಗಲಿಲ್ಲ. ಆದ್ದರಿಂದ ಅವರಿಗೆ ಚುನಾವಣೆ ಪ್ರತಿಷ್ಠೆಯಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ಸೇರುತ್ತದೆ. ಶಿವಮೊಗ್ಗ ಕ್ಷೇತ್ರದಲ್ಲಿ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಬೈಂದೂರು (ಬಿಜೆಪಿ) ಶಾಸಕರು ಇದ್ದಾರೆ. ಇದು ಚುನಾವಣೆಯಲ್ಲಿ ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ.
ಹಿಂದಿನ ಚುನಾವಣೆ ಫಲಿತಾಂಶ: 2009ರಲ್ಲಿ ಶಿವಮೊಗ್ಗ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ಚುನಾವಣಾ ಹೋರಾಟಕ್ಕೆ ನಾಂದಿ ಹಾಡಿತು. ಬಿ. ವೈ. ರಾಘವೇಂದ್ರ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಎಸ್. ಬಂಗಾರಪ್ಪ ಎದುರಾಳಿ. ರಾಘವೇಂದ್ರ 482,783 ಮತಗಳನ್ನು ಪಡೆದು ಎಸ್. ಬಂಗಾರಪ್ಪ (429,890 ಮತಗಳು) ಸೋಲಿಸಿದರು.
2014ರಲ್ಲಿ ಬಿಜೆಪಿ ಬಿ. ಎಸ್. ಯಡಿಯೂರಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆಗ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್‌ನಿಂದ ಎದುರಾಳಿಯಾದರು. ಯಡಿಯೂರಪ್ಪ 606,216 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 242,911 ಮತ ಪಡೆದು 2ನೇ ಸ್ಥಾನ, ಗೀತಾ ಶಿವರಾಜ್ ಕುಮಾರ್ 240,636 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
2018ರ ವಿಧಾನಸಭೆ ಚುನಾವಣೆ ಬಂದಾಗ ಯಡಿಯೂರಪ್ಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರದಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಆಗ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಬಿಜೆಪಿ ಬಿ. ವೈ. ರಾಘವೇಂದ್ರ ಕಣಕ್ಕಿಳಿಸಿತು. ಆಗ ಜೆಡಿಎಸ್‌ನಿಂದ ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಎದುರಾಳಿಯಾದರು. ರಾಘವೇಂದ್ರ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬಂಗಾರಪ್ಪ ಕುಟುಂಬಕ್ಕೆ ಮತ್ತೆ ಸೋಲುಣಿಸಿದರು.
2019ರ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ರಾಘವೇಂದ್ರ 729,872 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾದರು. ಮಧು ಬಂಗಾರಪ್ಪ 506,512 ಮತಗಳನ್ನು ಪಡೆದು ಸೋತರು.
ಈ ಚುನಾವಣೆಯಲ್ಲಿ ಗೆದ್ದು 4ನೇ ಬಾರಿ ಸಂಸದರಾಗುವ ಉತ್ಸಾಹದಲ್ಲಿ ಬಿ. ವೈ. ರಾಘವೇಂದ್ರ ಇದ್ದಾರೆ. ಹಿಂದಿನ ಚುನಾವಣೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕೆ. ಎಸ್. ಈಶ್ವರಪ್ಪ ಹಿಂದುತ್ವಕ್ಕೆ ಜನರ ಬೆಂಬಲವಿದೆ, ನಾನು ಗೆದ್ದು ಸಂಸತ್ ಪ್ರವೇಶಿಸಿ ಮೋದಿ ಕೈ ಬಲಪಡಿಸುತ್ತೇನೆ ಎಂಬ ನಂಬಿಕೆಯಲ್ಲಿದ್ದಾರೆ.












Click it and Unblock the Notifications