ಅರಣ್ಯ ಸಿಬ್ಬಂದಿಯಿಂದಲೇ ಅಕ್ರಮ ಮರ ಸಾಗಾಟ, ಆದರೂ ಪ್ರಕರಣ ದಾಖಲಿಸಿಲ್ಲ
ಶಿವಮೊಗ್ಗ. ಆಗಸ್ಟ್ 03: ಅಕ್ರಮ ಮರಗಳನ್ನು ಸಾಗಾಣೆ ನಡೆಸಿ ತನ್ನ ಮನೆಯಲ್ಲಿಟ್ಟುಕೊಂಡಿದ್ದ ಅರಣ್ಯಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳದೆ, ಕೇವಲ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸಿರಿಗೆರೆ ವಲಯ ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ದಿನದ ಹಿಂದೆ ಕುಂಸಿಯ ಅರಣ್ಯ ರಕ್ಷಕ ವಸಂತ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಬೀಟೆ ಮರದ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ಟರ್ ನಲ್ಲಿ ಆಯನೂರಿನ ಅರಣ್ಯ ಡಿಪೋಗೆ ತಂದು ಹಾಕಿದ್ದಾರೆ.
ಆದರೆ ವಸಂತ ಅವರು ಓರ್ವ ಅಧಿಕಾರಿಯಾಗಿ ಮರದ ತುಂಡುಗಳನ್ನು ಇಲಾಖೆಯ ಗಮನಕ್ಕೆ ತರದೆ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದು ಅಪರಾಧ. ಲಕ್ಷಾಂತರ ರೂ. ಬೆಲೆ ಬಾಳುವ ಮರವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿದ್ದ ವಸಂತ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಮನೆಯಲ್ಲಿ ಸಿಕ್ಕ ತುಂಡಗಳು ಅರಣ್ಯದಲ್ಲಿ ಗಾಳಿ, ಮಳೆಗೆ ಬಿದ್ದ ಮರವಾಗಿವೆ ಎಂದು ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸಿದ್ದಾರೆ.

ಸುಮಾರು 31 ಬೀಟೆ ಮರದ ತುಂಡುಗಳು ಸಿಕ್ಕಿವೆ. ಇವು ಲಕ್ಷಾಂತರ ರೂ. ಬೆಲೆ ಬಾಳುವ ಮರವಾಗಿವೆ. ಅರಣ್ಯದಂಚಿನ ಗ್ರಾಮಸ್ಥರು ಮನೆಯ ಉರುವಲಿಗೆ ಎಂದು ಸೌದೆ ತಂದರೆ ಕೇಸು ದಾಖಲಿಸುವ ಅರಣ್ಯ ಅಧಿಕಾರಿಗಳು, ತಮ್ಮ ಅಧಿಕಾರಿಯನ್ನು ಉಳಿಸಲು ಸುಳ್ಳು ಕೇಸು ದಾಖಲಿಸಿಕೊಂಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications