ಅಂಜನಾಪುರ ಜಲಾಶಯ ಭರ್ತಿ, ಬಾಗಿನ ಅರ್ಪಿಸಿದ ಯಡಿಯೂರಪ್ಪ
ಶಿವಮೊಗ್ಗ, ಜುಲೈ 18 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ತವರು ಜಿಲ್ಲೆ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಶಿಕಾರಿಪುರಕ್ಕೆ ಭೇಟಿ ನೀಡಿದ ಅವರು ಅಂಜನಾಪುರ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು.
ಶಿಕಾರಿಪುರ ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಮತ್ತು ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಅಂಜನಾಪುರ ಜಲಾಶಯವೇ ಪ್ರಮುಖ ಮೂಲವಾಗಿದೆ. ಇದೊಂದು ಚಿಕ್ಕ ಜಲಾಶಯವಾಗಿದ್ದು, 1.8 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದಾಗಿದೆ.

ಕುಮದ್ವತಿ ನದಿಗೆ ಅಡ್ಡಲಾಗಿ ಅಂಜನಾಪುರದಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ನದಿಯ ಉಗಮ ಸ್ಥಾನ ಕೋಣಂದೂರು, ರಿಪ್ಪನ್ ಪೇಟೆ, ಚೋರಡಿ ಭಾಗದಲ್ಲಿ ಭಾರೀ ಮಳೆಯಾದರೆ ಜಲಾಶಯಕ್ಕೆ ನೀರು ಹರಿದು ಬರುತ್ತದೆ.

ಸತತ ಬರಗಾಲದ ಬಳಿಕ ಎರಡು ವರ್ಷಗಳಿಂದ ಅಂಜನಾಪುರ ಜಲಾಶಯ ಭರ್ತಿಯಾಗುತ್ತಿದೆ. 2017ರಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿತ್ತು. ಆದರೆ, ಈ ಬಾರಿ ಭಾರೀ ಮಳೆಯ ಕಾರಣ ಜುಲೈ 20ಕ್ಕೂ ಮೊದಲೇ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.












Click it and Unblock the Notifications