ವಿಜಯೇಂದ್ರ ವಿರುದ್ಧ ಕೈ ಅಭ್ಯರ್ಥಿ; ಸಿದ್ದರಾಮಯ್ಯ ಮನೆ ಮುಂದೆ ಗಲಾಟೆ!
ಶಿವಮೊಗ್ಗ, ಏಪ್ರಿಲ್ 07; ಕರ್ನಾಟಕದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಮಾರ್ಚ್ 25ರಂದು 124 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿತ್ತು. ಏಪ್ರಿಲ್ 6ರಂದು 42 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದೆ.
ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿಯೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಕ್ಷೇತ್ರದ ಹಾಲಿ ಶಾಸಕರು ಬಿ. ಎಸ್. ಯಡಿಯೂರಪ್ಪ. ಆದರೆ ಅವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ, ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಬಿ. ಎಸ್. ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸದ ಕಾರಣ ಬೇರೆ ಪಕ್ಷಗಳು ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳಲು ತಂತ್ರ ರೂಪಿಸುತ್ತಿವೆ. ಕಾಂಗ್ರೆಸ್ ಟಿಕೆಟ್‌ಗೆ ನಾಗರಾಜು ಗೌಡ, ಗೋಣಿ ಮಹಾಂತೇಶ್ ಆಕಾಂಕ್ಷಿಗಳು. 2018ರ ಚುನಾವಣೆಯಲ್ಲಿ ಗೋಣಿ ಮಹಾಂತೇಶ್ 51,586 ಮತಗಳನ್ನು ಪಡೆದು 2ನೇ ಪಡೆದಿದ್ದರು. ಯಡಿಯೂರಪ್ಪ 86,983 ಮತಗಳನ್ನು ಪಡೆದಿದ್ದರು.
ಸಿದ್ದರಾಮಯ್ಯ ಮನೆ ಮುಂದೆ ಗಲಾಟೆ; ಶುಕ್ರವಾರ ಬೆಂಗಳೂರಿನಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು. ಬಿ. ವೈ. ವಿಜಯೇಂದ್ರ ಮುಂದೆ ಪಕ್ಷ ಸರಿಯಾದ ಅಭ್ಯರ್ಥಿ ಹಾಕುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದರು. ಕಾರ್ಯಕರ್ತರನ್ನು ತಡೆಯಲು ಬಂದ ಪೊಲೀಸರ ಜೊತೆಯೂ ವಾಗ್ವಾದ ನಡೆಸಿದರು.

ಈ ಬಾರಿಯ ಚುನಾವಣೆಯಲ್ಲಿ ನಾಗರಾಜು ಗೌಡಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯರ್ತರು ಗದ್ದಲ ಮಾಡಿದರು. ಗೋಣಿ ಮಹಾಂತೇಶ್‌ಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದಿಲ್ಲ. ಅವರ ಹಿಂದೆ 10 ಜನ ಕಾರ್ಯಕರ್ತರು ಸಹ ಇಲ್ಲ ಎಂದು ಹೇಳಿದರು. ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ ಎಂದು ಧರಣಿ ನಿರತರು ಆರೋಪ ಮಾಡಿದರು.
ಕ್ಷೇತ್ರದ ರಾಜಕೀಯ; ಶಿಕಾರಿಪುರ ಮೊದಲು ಸೊರಬ ಕ್ಷೇತ್ರದಲ್ಲಿತ್ತು. 1962ರಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ರಚನೆಗೊಂಡಿತು. 1983ರ ಚುನಾವಣೆಯಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ಶಿಕಾರಿಪುರದಿಂದ ಆರಿಸಿ ಬಂದರು. ಮೊದಲ ಚುನಾವಣೆಯಲ್ಲಿ ಅವರು ಗೆದ್ದಿದ್ದು 22,183 ಮತಗಳಿಂದ. ಇಲ್ಲಿಂದ ಆರಿಸಿ ಬಂದಿರುವ ಬಿಜೆಪಿಯ ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಸೊರಬದ ಎಸ್. ಬಂಗಾರಪ್ಪ ತಂತ್ರವನ್ನು ರೂಪಿಸಿ ಶಿಕಾರಿಪುರದಲ್ಲಿ ಯಡಿಯೂರಪ್ಪರಿಗೆ ಸೋಲಿನ ರುಚಿಯನ್ನು ತೋರಿಸಿದ್ದಾರೆ.
1999ರಲ್ಲಿ ವಿಧಾನಸಭೆ ಮತ್ತು ಲೋಕಸಭೆ ಒಟ್ಟಿಗೆ ಬಂತು. ಕಾಂಗ್ರೆಸ್‌ನಲ್ಲಿದ್ದ ಎಸ್. ಬಂಗಾರಪ್ಪ ಶಿಕಾರಿಪುರದಲ್ಲಿ ಸಾದರ ಲಿಂಗಾಯತ ಸಮುದಾಯದ ಮಹಾಲಿಂಗಪ್ಪಗೆ ಟಿಕೆಟ್ ಕೊಡಿಸಿದರು. ಸತತ ನಾಲ್ಕು ಬಾರಿ ಗೆದ್ದಿದ್ದ ಯಡಿಯೂರಪ್ಪ ಕ್ಷೇತ್ರ ಬಿಟ್ಟು ರಾಜ್ಯಾದ್ಯಂತ ಪ್ರಚಾರ ನಡೆಸಲು ಹೋದರು. ಬಂಗಾರಪ್ಪ ತಂತ್ರ ಫಲಿಸಿತು. ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಮಹಾಲಿಂಗಪ್ಪ 55,852 ಮತಗಳನ್ನು ಪಡೆದು 7,661 ಮತಗಳ ಅಂತರದಲ್ಲಿ ಗೆಲುವು ಕಂಡರು. ಆದರೆ 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರಿದ್ದು ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪಗೆ ಸಹಾಯಕವಾಯಿತು.
ಶಿಕಾರಿಪುರದಲ್ಲಿ ಯಡಿಯೂರಪ್ಪ ಪ್ರಭಾವ ಹೇಗಿದೆ? ಎಂಬುದಕ್ಕೆ 2013ರ ಚುನಾವಣೆ ಉದಾಹರಣೆ. ಬಿಜೆಪಿಯಿಂದ ಹೊರಹೋಗಿ ಕೆಜೆಪಿ ಕಟ್ಟಿದ ಅವರು ಶಿಕಾರಿಪುರದಲ್ಲಿ ಪಕ್ಷದಿಂದ ಕಣಕ್ಕಿಳಿದರು. ಆಗ ಯಡಿಯೂರಪ್ಪ ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಸಿಕ್ಕಿದ್ದು 2,383 ಮತಗಳು ಮಾತ್ರ. ಯಡಿಯೂರಪ್ಪ ಕೆಜೆಪಿಯಿಂದ ನಿಂತರೂ 24,425 ಮತಗಳ ಅಂತರದಲ್ಲಿ ಗೆದ್ದು ಬಂದರು. 1983 ರಿಂದ 2018ರ ತನಕ 8 ಬಾರಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆದ್ದಿದ್ದಾರೆ. 1999, 1978, 1972, 1969, 1962ರಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.
ಚುನಾವಣಾ ಚಿತ್ರಣ; ಶಿಕಾರಿಪುರ ಒಟ್ಟು ಮತದಾರರು ಸುಮಾರು 1,91,955. ಇವರಲ್ಲಿ ಲಿಂಗಾಯತ ಎಲ್ಲಾ ಒಳಪಂಗಡ ಸೇರಿ 57 ಸಾವಿರ ಮತಗಳು, ಲಂಬಾಣಿಗಳು 26 ಸಾವಿರ, ಮುಸ್ಲಿಮರು 21 ಸಾವಿರ, ಕುರುಬರು 19 ಸಾವಿರ, ಎಸ್‌ಸಿ/ ಎಸ್‌ಟಿ 16 ಸಾವಿರ, ಈಡಿಗರು 12 ಸಾವಿರ ನಿರ್ಣಾಯಕರು. ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿ ಎನ್ನುವುದಕ್ಕಿಂತ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಎಷ್ಟು ಮತದ ಅಂತರದಲ್ಲಿ ಗೆಲ್ಲುತ್ತಾರೆ? ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications