ಬೆಂಗಳೂರಿಗೆ ಶರಾವತಿ ನೀರು ಬೇಡ, ಸಾಗರ ಬ್ಲಾಕ್ ಕಾಂಗ್ರೆಸ್ ಮನವಿ
ಶಿವಮೊಗ್ಗ, ಜೂನ್ 26 : ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಕೈಬಿಡಬೇಕು ಎಂದು ಸಾಗರ ತಾಲೂಕು ಕಾಂಗ್ರೆಸ್ ಘಟಕ ಒತ್ತಾಯಿಸಿದೆ. ಈಗಾಗಲೇ ಪ್ರಸ್ತಾವಿತ ಯೋಜನೆ ವಿರೋಧಿಸಿ ಜುಲೈ 10ರಂದು ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿದೆ.
ಬುಧವಾರ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಸಾಗರ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಸ್‌ರೀಫ್ ಇಬ್ರಾಹಿಂ ಮುಂತಾದವರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.
ವಿಧಾನಸೌಧದಲ್ಲಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಶರಾವತಿ ನದಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆಯನ್ನು ಅನೇಕ ಕಾರಣಗಳಿಂದ ಮಲೆನಾಡು ಭಾಗದ ಜನರು ವಿರೋಧಿಸುತ್ತಿದ್ದು, ಈ ಯೋಜನೆ ಕೈ ಬಿಡಬೇಕೆಂದು ಒತ್ತಾಯಿಸಲಾಯಿತು.

ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 430 ಕಿ.ಮೀ.ದೂರದ ಲಿಂಗನಮಕ್ಕಿ ಜಲಾಶಯದಿಂದ ಪೈಪ್ ಲೈನ್ ಮೂಲಕ ನೀರು ತರಲು ಡಿ.ಪಿ.ಆರ್ ಸಿದ್ಧಪಡಿಸುವಂತೆ ಪರಮೇಶ್ವರ ಅವರು ಆದೇಶ ನೀಡಿದ್ದಾರೆ.
ಉದ್ದೇಶಿತ ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಹಲವು ಪರಿಸರ ಹೋರಾಟಗಾರರು, ಪತ್ರಕರ್ತರು ಈ ಒಕ್ಕೂಟದಲ್ಲಿದ್ದಾರೆ.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾವನೆ ಕೈ ಬಿಡಬೇಕು ಎಂದು ಆಗ್ರಹಿಸಿ ಜುಲೈ 10ರಂದು ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿದೆ. ಈಗ ಸಾಗರ ತಾಲೂಕು ಕಾಂಗ್ರೆಸ್ ಘಟಕವೇ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.












Click it and Unblock the Notifications