ಶಿವಮೊಗ್ಗ; ಸೆಕ್ಷನ್ 144 ಆದೇಶ ಮಾರ್ಪಾಡು, ವಿವರ
ಶಿವಮೊಗ್ಗ, ಅಕ್ಟೋಬರ್ 09; ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿತ್ತು. ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಆದೇಶದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಆದೇಶ ಹೊರಡಿಸಲಾಗಿದೆ.
ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಈ ಕುರಿತು ಆದೇಶಿಸಿದ್ದಾರೆ. ಮಾರ್ಪಾಡುಗೊಳಿಸಲಾದ ಆದೇಶದ ಅನ್ವಯ ಶಿವಮೊಗ್ಗ ಮಹಾನಗರಪಾಲಿಕೆಯ ಇತರೆ ಪ್ರದೇಶದಲ್ಲಿ ಕಲಂ 144 ಆದೇಶವನ್ನು ತೆರವುಗೊಳಿಸಲಾಗಿದೆ.

ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ರಾಗಿಗುಡ್ಡ-ಶಾಂತಿನಗರ ವ್ಯಾಪ್ತಿಯನ್ನು ಹೊರತುಪಡಿಸಿ ಶಿವಮೊಗ್ಗ ಮಹಾನಗರಪಾಲಿಕೆಯ ಇತರೆ ಪ್ರದೇಶದಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ಆದೇಶವನ್ನು ತೆರವುಗೊಳಿಸಿ ಆದೇಶಿಸಲಾಗಿದೆ.
ರಾಗಿಗುಡ್ಡ-ಶಾಂತಿನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ 8/10/2023ರಿಂದ ಮುಂದಿನ ಆದೇಶದವರೆಗೆ ನಿಬಂಧನೆಗಳನ್ನು ವಿಧಿಸಿ ಕಲಂ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ನಿಷೇಧಾಜ್ಞೆ ಜಾರಿಯಾಗಿತ್ತು; ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ದಿನಾಂಕ 01/10/2023ರಂದು ರಾಗಿಗುಡ್ಡದಲ್ಲಿ ಕಲ್ಲುತೂರಾಟ ನಡೆದಿತ್ತು. ಈ ಹಿನ್ನೆಲೆ ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿದ ಕಾರಣ ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಪ್ರಸ್ತುತ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ರಾಗಿಗುಡ್ಡ-ಶಾಂತಿನಗರ ವ್ಯಾಪ್ತಿಯನ್ನು ಹೊರತುಪಡಿಸಿ ಶಿವಮೊಗ್ಗ ಮಹಾನಗರಪಾಲಿಕೆಯ ಇತರೆ ಪ್ರದೇಶದಲ್ಲಿ ಸೆಕ್ಷನ್ 144 ಆದೇಶವನ್ನು ತೆರವುಗೊಳಿಸಲಾಗಿದೆ.
ಯಾವುದಕ್ಕೆ ನಿರ್ಬಂಧ?; ಮಾರ್ಪಾಡು ಮಾಡಲಾದ ಆದೇಶದ ಪ್ರಕಾರ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ರಾಗಿಗುಡ್ಡ-ಶಾಂತಿನಗರ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ 5 ಜನರಿಗಿಂತಲು ಹೆಚ್ಚು ಜನರು ಗುಂಪು ಸೇರುವುದು ಮತ್ತು ಓಡಾಡುವುದು ನಿಷೇಧ. ಅಲ್ಲದೇ ಈ ಅವಧಿಯಲ್ಲಿ ಯಾವುದೆ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭ ಮಾಡುವಂತಿಲ್ಲ.
ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭ ಘೋಷಣೆ ಕೂಗುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಪ್ರಚೋದನಕಾರಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಕಟ್ಟುವುದನ್ನು ನಿಷೇಧ. ಮಾರಕಾಸ್ತ್ರ, ಸ್ಪೋಟಕ ಹೊಂದುವುದು, ಅವುಗಳನ್ನು ಹಿಡಿದು ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ.
ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕರ್ನಾಟಕದ ಪ್ರತಿಪಕ್ಷ ಬಿಜೆಪಿಯ ನಾಯಕರು ಈ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ ಕಲ್ಲು ತೂರಾಟದಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲನೆ ನಡೆಸಿತ್ತು. ರಾಗಿಗುಡ್ಡದಲ್ಲಿ ನಡೆದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿತ್ತು.
ನಕಲಿ ವಿಡಿಯೋಗಳ ಓಡಾಟ; ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಬಳಿಕ ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಕುರಿತು ಶಿವಮೊಗ್ಗ ಪೊಲೀಸರು ಸಹ ಫೇಸ್‌ಬುಕ್ ಮೂಲಕ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂಬ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಘಟನೆಯು ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ ದಿನಾಂಕ 3/9/2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಗಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿರುತ್ತದೆ ಎಂದು ವಿಡಿಯೋವೊಂದಕ್ಕೆ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಘಟನೆ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣವೂ ಸಹಾ ದಾಖಲಾಗಿರುತ್ತದೆ. ನೈಜ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಸುದ್ಧಿಯನ್ನು ತಿರುಚಿ ವೈರಲ್ ಮಾಡಿದವರ ವಿರುದ್ಧ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 354/2023 ರೀತ್ಯಾ ಪ್ರಕರಣ ದಾಖಲಿಸಿರುತ್ತದೆ ಎಂದು ಹೇಳಿದ್ದರು.











Click it and Unblock the Notifications