ಮತಾಂಧ ಮುಸಲ್ಮಾನರ ಗಲಭೆಯನ್ನು ಸಜ್ಜನ ಮುಸಲ್ಮಾನರು ಖಂಡಿಸಬೇಕು: ಸಚಿವ ಈಶ್ವರಪ್ಪ
ಶಿವಮೊಗ್ಗ, ಆಗಸ್ಟ್ 12: ಮತಾಂಧ ಮುಸಲ್ಮಾನರ ಗಲಭೆ, ಗುಂಡಾಗಿರಿಯನ್ನು ಸಜ್ಜನ ಮುಸ್ಲಿಮರು ವಿರೋಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ ಅವರು, ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿನ ಗಲಭೆ ವಿಚಾರವಾಗಿ ನಾನು ಎಲ್ಲಾ ಮುಸಲ್ಮಾನರು ಗೂಂಡಾಗಳು, ಮತಾಂಧರು ಎನ್ನುವುದಿಲ್ಲ. ಅವರಲ್ಲಿ ಸಜ್ಜನರು ಇದ್ದಾರೆ, ಯಾರೋ ಕೆಲವರು ಮಾಡುವ ಅನಾಚಾರಕ್ಕೆ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ, ಕಚೇರಿ ಧ್ವಂಸ ಆಗಿದ್ದು ಬಹಳ ನೋವಾಗಿದೆ. ಆದರೆ ಘಟನೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ಇದುವರೆಗೂ ನೀಡಿಲ್ಲ. ಡಿ.ಕೆ ಶಿವಕುಮಾರ್ ಅವರೇ, ಇದನ್ನಾದರೂ ಖಂಡಿಸಬೇಕು. ನಿಮ್ಮ ಮನೆಗೆ ಬೆಂಕಿ ಹಚ್ಚಿದ್ದಾಗ ಮಾತ್ರ ನೀವು ಖಂಡಿಸುತ್ತೀರಾ? ಎಂದು ಪ್ರಶ್ನಿಸಿದ್ದರು.

ಅಂಧಕಾರದ ಮತಾಂಧರನ್ನು ಈಗಿನಿಂದಲೇ ನಿಯಂತ್ರಿಸದಿದ್ದರೆ, ನಮ್ಮ ಮನೆಗೆ ಬೆಂಕಿ ಹಚ್ಚುವ ಸ್ಥಿತಿ ಬರುತ್ತದೆ. ಗುಂಡಾಗಿರಿ, ಕೊಲೆ, ಧ್ವಂಸ ಮಾಡುವುದಕ್ಕೆ ಮತಾಂಧ ಮುಸಲ್ಮಾನರು ಈ ದೇಶದಲ್ಲಿ ಸಿದ್ದವಾಗುತ್ತಿದ್ದಾರೆ ಎಂದು ಹೇಳಿದರು.
ಎಸ್.ಡಿ.ಪಿ.ಐ ನಂತಹ ಮತಾಂಧ ಸಂಘಟನೆಗಳು ಈ ರೀತಿ ಗಲಭೆಗಳನ್ನು ಪೋಷಿಸುತ್ತಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಬೇಕಾದರೆ, ಮತಾಂಧರ ವಿರುದ್ಧ ದೇಶದ ಜನರು ಒಂದಾಗಬೇಕು. ಮತಾಂಧ ಮುಸಲ್ಮಾನರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದ ಸಚಿವ ಈಶ್ವರಪ್ಪ ತಿಳಿಸಿದರು.
ಮತಾಂಧ ಗಲಭೆಕೋರರು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವವರನ್ನು ಸದೆ ಬಡಿಯಬೇಕು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.












Click it and Unblock the Notifications