ಶರಾವತಿ ಮುಳುಗಡೆ ಸಂತ್ರಸ್ತರ ದಶಕಗಳ ಸಮಸ್ಯೆ ಶೀಘ್ರದಲ್ಲಿಯೇ ಪರಿಹಾರ
ಶಿವಮೊಗ್ಗ, ಮೇ 11: ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಯೋಜನೆಗಾಗಿ ಭೂಮಿ, ಮನೆಯನ್ನು ಬಿಟ್ಟುಕೊಟ್ಟ ಮುಳುಗಡೆ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಸಭೆಯನ್ನು ನಡೆಸಲಾಗಿದೆ. ಮುಳುಗಡೆ ಸಂತ್ರಸ್ತರ ದಶಕಗಳ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರದ ಭರವಸೆ ಸಿಕ್ಕಿದೆ. ಸಂತ್ರಸ್ತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೆಲವು ದಿನಗಳ ಹಿಂದೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಸಭೆಯನ್ನು ನಡೆಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆಗಳು ಹಾಗೂ ಭೂ ಹಕ್ಕಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಲಾಗಿದೆ.

ಈ ಸಭೆಯಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಶಿವಮೊಗ್ಗ ಗ್ರಾಮಾಂತರದ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಹಿರಿಯ ವಕೀಲರಾದ ಜಯಂತ್ ಸೇರಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾದ ವಿಷಯಗಳು
* ಶಿವಮೊಗ್ಗ ಜಿಲ್ಲೆಯಲ್ಲಿನ ಸೊಪ್ಪಿನಬೆಟ್ಟ ಮತ್ತು ಕಾನು ಭೂಮಿಗಳ ಅನಧೀಕೃತ ಸಾಗುವಳಿ ಸಕ್ರಮಗೊಳಿಸುವ ಕುರಿತು ಮತ್ತು ಹಂಗಾಮಿ ಮನೆಗಳ ಪತ್ರಗಳನ್ನು ಖಾಯಂಗೊಳಿಸುವ ಕುರಿತು.
* ಕಂದಾಯ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಲಾಗಿರುವ ಸೂಚಿತ ಅರಣ್ಯ (ಪಿಎಫ್) ಎಂಬ ಉಲ್ಲೇಖವನ್ನು ಕೈಬಿಡುವ ಕುರಿತು. ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 4 ರ ಅಡಿಯಲ್ಲಿ ಮೀಸಲು ಅರಣ್ಯದ ಅಂತಿಮ ಅಧಿಸೂಚನೆಗೆ ಕಾಲಮಿತಿ ನಿಗದಿಪಡಿಸುವುದು ಮತ್ತು ಅನುಮೋದನೆ ನೀಡುವ ಕುರಿತು.
* ಮೈಸೂರು ಸರ್ಕಾರದಿಂದ ನೀಡಲಾದ ಹಕ್ಕುಪತ್ರಗಳಿಗೆ ಇ-ಸ್ವತ್ತು ದಾಖಲೆ ಸೃಜಿಸುವ ಕುರಿತು ಹಾಗೂ ಸರ್ಕಾರದ ವಿವಿಧ ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರ ಪುನರ್ವಸತಿ ಜಮೀನುಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಕುರಿತು.
* 27/04/1978ರ ಪೂರ್ವದ ಮೂರು ಎಕರೆ ಅರಣ್ಯ ಭೂಮಿಯನ್ನು ಸಕ್ರಮಗೊಳಿಸುವುದು ಮತ್ತು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ 2006ರ ಅಡಿಯಲ್ಲಿ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ವಿಷಯಗಳನ್ನು ಸೇರಿದಂತೆ ಈ ಭಾಗದ ಅನೇಕ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ.
* ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ವಾರಾಹಿ, ಚಕ್ರ, ಸಾವೆಹಕ್ಲು, ಭಧ್ರಾ, ತುಂಗಾ ಹಾಗೂ ಇನ್ನಿತರೆ ವಿದ್ಯುತ್ ಮತ್ತು ನೀರಾವರಿ ಯೋಜನೆಗಳ ಮುಳುಗಡೆ ಸಂತ್ರಸ್ತರ ಭೂ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ 0.05 ಗುಂಟೆ ಒಳಗಿನ ವಿಸ್ತೀರ್ಣದ ಕಂದಾಯ ನಿವೇಶನವನ್ನು ಭೂ ಪರಿವರ್ತನೆ ಮಾಡುವ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ.
ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರವು ಅಗತ್ಯ ಕ್ರಮ ಕೈಗೊಂಡು, ಅರಣ್ಯ ಮತ್ತು ಕಂದಾಯ ಭೂ ಹಕ್ಕಿನ ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಂಸದರ ಸಭೆ: ಶರಾವತಿ ಮುಳುಗಡೆ ಸಂತ್ರಸ್ತರ ಶಾಶ್ವತ ಪರಿಹಾರಕ್ಕೆ ನಮ್ಮ ಬದ್ಧತೆ ಇದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ಶರಾವತಿ ಸಂತ್ರಸ್ತರ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ತೋರಿದ ಇಚ್ಛಾಶಕ್ತಿಯ ಕಾರಣ ನಡೆಸಿದ ಕಾನೂನಾತ್ಮಕ ಹೋರಾಟದ ಫಲ ದೇಶದ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗಳಲ್ಲಿ ಕೆಲವು ಲೋಪದೋಷ ಕಂಡು ಬರುತ್ತಿದೆ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರ ಸಾಧಕ ಬಾಧಕಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಸಿಗುವ ಕೆಲಸ ಆಗಬೇಕೆಂಬ ಕಾಳಜಿಯಿಂದ ಹಾಗೂ ಭವಿಷ್ಯದ ದೃಷ್ಟಿಯಿಂದ ಅಧಿಕಾರಿಗಳಿಗೆ ಸಮೀಕ್ಷೆ ನಡೆಸುವ ಕುರಿತು ಸೂಕ್ತ ನಿರ್ದೇಶನ ಕೊಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications