'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'
ಶಿವಮೊಗ್ಗ, ಏಪ್ರಿಲ್ 10: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುತ್ತಿದ್ದಾರೆ . ಆದರೆ ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಶ್ನಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಈ ಬಾರಿ ದೇಶವನ್ನು ಬಿಜೆಪಿ ಮುಕ್ತ ಮಾಡಲು ತೀರ್ಮಾನ ಮಾಡಿದ್ದಾರೆ. ಬಿಜೆಪಿಯವರು ಚುನಾವಣೆಯ ಪ್ರಣಾಳಿಕೆಯಲ್ಲಿ ಮತ್ತೆ ರಾಮನ ಜಪ ಮಾಡಲು ಆರಂಭಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿರುವುದೇ ಬಿಜೆಪಿ ಸಾಧನೆ ಎಂದು ಹರಿಹಾಯ್ದರು.
ರಾಘವೇಂದ್ರ ಒಮ್ಮೆಯಾದರೂ ಸಂಸತ್ತಿನಲ್ಲಿ ಮಾತನಾಡಿದ್ದಾರಾ ಸ್ಪಷ್ಟಪಡಿಸಲಿ ಎಂದ ಮಧು, ಬಿಜೆಪಿಯನ್ನು ಗೆಲ್ಲಿಸಿದರೆ ಅವರು ಇಡೀ ದೇಶವನ್ನೇ ದಿಕ್ಕಾಪಾಲು ಮಾಡುತ್ತಾರೆ. ಕಾಶ್ಮೀರದಲ್ಲಿ ಯೋಧರು ಹುತಾತ್ಮರಾಗುವುದಕ್ಕೆ ಕಾರಣವೇ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರು ರಾಘವೇಂದ್ರ ಅವರನ್ನು ಹೊರತುಪಡಿಸಿ ಬೇರೆ ಯಾವ ನಾಯಕರನ್ನು ಬೆಳೆಸಿದ್ದಾರೆ ಎಂದು ಬಿಎಸ್ ವೈ ವಿರುದ್ಧ ಕಿಡಿಕಾರಿದ ಮಧು, ಕೇಂದ್ರ ಸರ್ಕಾರ ಐಟಿ ದಾಳಿ ಮೂಲಕ ಮುಖಂಡರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಒಬ್ಬರ ಮನೆ ಮೇಲೆ ಐಟಿ ದಾಳಿಯಾಗಿ ಹಣ ಸಿಕ್ಕಿತ್ತು. ಆದರೆ ಆ ಹಣ ಮಧುಬಂಗಾರಪ್ಪ ಅವರಿಗೆ ಸೇರಿದ್ದು ಎಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
2004 ರಲ್ಲಿ ಬಂಗಾರಪ್ಪ ಅವರು ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ, ಈಶ್ವರಪ್ಪ ಎಂದರೆ ಯಾರೂ ಎಂದು ಜನರಿಗೆ ಗೊತ್ತಾಗುತ್ತಿರಲಿಲ್ಲ. ರಾಘವೇಂದ್ರ ನನಗೆ ಇಂಪೋರ್ಟೆಡ್ ಅಭ್ಯರ್ಥಿ. ಈ ಬಾರಿ ಚುನಾವಣೆಯಲ್ಲಿ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.












Click it and Unblock the Notifications