ಕೊರೊನಾ ಸೋಂಕಿತರ ಸಂಬಂಧಿಯಿಂದ ಮೆಗ್ಗಾನ್ ಆಸ್ಪತ್ರೆ ಎದುರು ಪ್ರತಿಭಟನೆ
ಶಿವಮೊಗ್ಗ, ಮೇ 4: ಮೆಗ್ಗಾನ್ ಆಸ್ಪತ್ರೆಯಲ್ಲಿನ ಕರೋನ ಸೋಂಕಿತರ ಸಂಬಂಧಿಗಳು ಇವತ್ತು ದಿಢೀರ್ ಪ್ರತಿಭಟನೆ ನಡೆಸಿದರು. ಆಸ್ಪತ್ರೆ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರ ಆರೈಕೆಗೆ ಈವರೆಗೂ ಸಂಬಂಧಿಯೊಬ್ಬರನ್ನು ಬಿಡಲಾಗುತ್ತಿತ್ತು. ಪಿಪಿಇ ಕಿಟ್ ಧರಿಸಿಕೊಂಡು ಸಂಬಂಧಿಗಳು ವಾರ್ಡ್ ಒಳಗೆ ಹೋಗಬಹುದಾಗಿದೆ. ಆದರೆ ಇವತ್ತು ಮಧ್ಯಾಹ್ನ ಸೋಂಕಿತರ ಜೊತೆಗಿದ್ದ ಸಂಬಂಧಿಗಳನ್ನು ದಿಢೀರನೆ ವಾರ್ಡ್ ನಿಂದ ಹೊರಗೆ ಕಳುಹಿಸಲಾಗಿದೆ.
ಸಂಬಂಧಿಗಳ ಆರೋಪ ಏನು?
ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಔಷಧೋಪಚಾರವು ಸರಿಯಾಗಿಲ್ಲ. ಮನೆಯವರೊಬ್ಬರು ಇದ್ದರೆ ಎಲ್ಲವೂ ಸರಿಯಾಗಿ ನಡೆಯಲಿದೆ. ಈಗ ಎಲ್ಲರನ್ನು ದಿಢೀರನೆ ಹೊರಗೆ ಕಳುಹಿಸಿ, ನಮ್ಮವರ ಜೀವಕ್ಕೆ ಕುತ್ತು ತರುವ ಪ್ರಯತ್ನ ನಡೆಯತ್ತಿದೆ ಎಂದು ಆರೋಪಿಸಿದರು.

ಎಮರ್ಜೆನ್ಸಿ ವಾರ್ಡ್ ಬಳಿ ಪ್ರತಿಭಟನೆ
ರೋಗಿಗಳ ಸಂಬಂಧಿಗಳು ಎಮರ್ಜೆನ್ಸಿ ವಾರ್ಡ್ ಕಡೆ ಇರುವ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ತಮ್ಮನ್ನು ವಾರ್ಡ್ ಒಳಗೆ ಬಿಡಬೇಕು ಎಂದು ಆಗ್ರಹಿಸಿದರು. ವಿಚಾರ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರೋಗಿಗಳ ಸಂಬಂಧಿಗಳನ್ನು ಸಮಾಧಾನಪಡಿಸಿದರು.

ಮೆಗ್ಗಾನ್ ಆಸ್ಪತ್ರೆ ಆಡಳಿತ ತಮ್ಮನ್ನು ಒಳಗೆ ಬಿಡಬೇಕು. ಇಲ್ಲವಾದಲ್ಲಿ ತಮ್ಮ ಸಂಬಂಧಿಗಳ ಜೀವಕ್ಕೆ ತೊಂದರೆಯಾದರೆ ಆಡಳಿತವೇ ಹೊಣೆ ಎಂದು ಎಚ್ಚರಿಸಿದರು.












Click it and Unblock the Notifications