ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಚುನಾವಣೆಗೆ ಪ್ಲಾನ್ ಸಿದ್ಧ: ನಾಲ್ವರು ಪ್ರಮುಖ ನಾಯಕರು ಪಕ್ಷ ಸೇರ್ಪಡೆ
ಶಿವಮೊಗ್ಗ, ಡಿಸೆಂಬರ್5: ಚುನಾವಣೆಗೂ ಸಮೀಪಿಸುತ್ತಿದ್ದಂತೆ ಜಿಲ್ಲಾ ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ. ಅಳೆದು ತೂಗಿ ಕೆಲವು ನಾಯಕರನ್ನು ಪಕ್ಷಕ್ಕೆ ಕರೆತರಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷದ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲಾಗುತ್ತಿದೆ.
ಮುಂದಿನ ವರ್ಷ ನಡೆಯುವ ಸಾಲು ಸಾಲು ಚುನಾವಣೆಗೆ ಈಗಿನಿಂದಲೆ ರಣತಂತ್ರ ರೂಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು ತನ್ನ ಭದ್ರ ಕೋಟೆಯಾಗಿ ಉಳಿಸಿಕೊಳ್ಳಲು ಬಿಜೆಪಿ ತರಹೇವಾರಿ ತಂತ್ರಗಳನ್ನು ಹೆಣೆಯಲು ಆರಂಭಿಸಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪುನಃ ಗೆಲುವು ಸಾಧಿಸಲು ರಣ ತಂತ್ರ ರೂಪಿಸುತ್ತಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ವಿಮಾನ ನಿಲ್ದಾಣ..? ಕಾಮಗಾರಿಯ ಸ್ಥಿತಿಗತಿ ಹೇಗಿದೆ ತಿಳಿಯಿರಿ
ಜಿಲ್ಲೆಯಲ್ಲಿ ಸದ್ಯ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಮಾತ್ರ ನೇರ ಎದುರಾಳಿಯಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದತ್ತ ದೊಡ್ಡ ಸಂಖ್ಯೆಯ ಮತಗಳು ಹರಿದು ಹೋಗದಂತೆ ತಡೆಯಲು ಬಿಜೆಪಿಯಲ್ಲಿ ಕಸರತ್ತು ಆರಂಭವಾಗಿದೆ. ಇದೆ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪಡೆಯಬಹುದಾದ ಮತಗಳಿಗಿಂತಲು ಹೆಚ್ಚಿನ ಮತಗಳನ್ನು ಈಗಲೇ ಒಗ್ಗೂಡಿಸಿ, ಭದ್ರಪಡಿಸಿಕೊಳ್ಳಲು ಬಿಜೆಪಿ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ.

ಕಾಂಗ್ರೆಸ್, ಜೆಡಿಎಸ್‌ನ ನಾಯಕರು ಬಿಜೆಪಿ ಸೇರ್ಪಡೆ
ಮುಂಚೂಣಿ ನಾಯಕರನ್ನು ಬಿಟ್ಟು, ಉಳಿದ ನಾಯಕರನ್ನು ಬಿಜೆಪಿ ಸೆಳೆದುಕೊಳ್ಳುತ್ತಿದೆ. ಆಯಾ ಕ್ಷೇತ್ರದಲ್ಲಿ ಜಾತಿಯ ಮತಗಳು, ಪ್ರಭಾವವನ್ನು ಗಮನಿಸಿ ಎರಡನೇ ಹಂತದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ನಾಲ್ವರು ಪ್ರಮುಖ ನಾಯಕರು ಬಿಜೆಪಿ ಸದಸ್ಯತ್ವ ಪಡೆದಿರುವುದು ಇದಕ್ಕೆ ಉದಾಹರಣೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೊರಬದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜು ತಲ್ಲೂರು, 21,721 ಮತಗಳನ್ನು ಪಡೆದಿದ್ದರು. ಹೆಚ್.ಟಿ.ಬಳಿಗಾರ್, ಶಿಕಾರಿಪುರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದರು. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2013ರಲ್ಲಿ 15 ಸಾವಿರ ಮತಗಳು, 2018ರಲ್ಲಿ 13 ಸಾವಿರ ಮತ ಗಳಿಸಿದ್ದರು. ಸದ್ಯ ಇಬ್ಬರೂ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಾಜಿ ಸಿಎಂ ಬಂಗಾರಪ್ಪ ಸಂಬಂಧಿ ಬಿಜೆಪಿ ಸೇರ್ಪಡೆ
ಡಾ. ಧನಂಜಯ ಸರ್ಜಿ, ಶಿವಮೊಗ್ಗ ನಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಜನಪರ ಜೀವಪರ ಘೋಷಣೆಯೊಂದಿಗೆ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ದೊಡ್ಡ ಮೊತ್ತದ ಮತ ಸೆಳೆಯುವ ಸಾಧ್ಯತೆ ಇತ್ತು ಹಾಗೂ ಯುವ ಉದ್ಯಮಿ ಕೆ.ಎಸ್.ಪ್ರಶಾಂತ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಂಬಂಧಿ. ಸಾಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಯೋಚನೆಯಲ್ಲಿದ್ದರು. ತಾಲೂಕಿನಾದ್ಯಂತ ಸಂಚರಿಸಿ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡಿದ್ದರು ಸದ್ಯ ಇವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸಂಘಟನೆಯ ಶಕ್ತಿ ಅಧಿಕವಾಗಲಿದೆ
ಡಾ.ಧನಂಜಯ ಸರ್ಜಿ ಮತ್ತು ಪ್ರಶಾಂತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರು, 'ಮುಖಂಡರ ಪಕ್ಷ ಸೇರ್ಪಡೆ ಇಲ್ಲಿಗೆ ನಿಲ್ಲುವುದಿಲ್ಲ' ಎಂಬ ಸುಳಿವು ನೀಡಿದ್ದಾರೆ. ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣದ ವಾತಾವರಣವಿದೆ. ಇದು ಚುನಾವಣೆ ಸಂದರ್ಭದ ಪಕ್ಷ ಸೇರ್ಪಡೆಯಲ್ಲ. ಸೇರ್ಪಡೆಗಳು ನಿರಂತರವಾಗಿರಲಿದೆ. ಇದರಿಂದ ಸಂಘಟನೆಯ ಶಕ್ತಿ ಅಧಿಕವಾಗಲಿದೆ. ಚುನಾವಣೆ ಸಂದರ್ಭ ಪಕ್ಷ ಸೇರ್ಪಡೆ ಸಂಘಟನೆಗೆ ವೇಗ ನೀಡಲಿದೆ. ಸೊರಬದ ರಾಜು ತಲ್ಲೂರು, ಶಿಕಾರಿಪುರದ ಹೆಚ್.ಟಿ.ಬಳಿಗಾರ್, ಭದ್ರಾವತಿಯ ಕೆಂಚೇನಹಳ್ಳಿ ಕುಮಾರ್ ಅವರು ಗಣನೀಯವಾಗಿ ಮತಗಳನ್ನು ತರಬಲ್ಲವರಾಗಿದ್ದಾರೆ ಎಂದು ಹೇಳಿದ್ದಾರೆ.

ಮನ ಪರಿವರ್ತನೆಯಾಗಿ ಬಿಜೆಪಿ ಸೇರ್ಪಡೆ ಎಂದ ಕೆ.ಎಸ್.ಪ್ರಶಾಂತ್
ಬಿಜೆಪಿ ಪಕ್ಷವು ಮುಖಂಡರ ಸೇರ್ಪಡೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಯಾರಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬದಲು ಮತ ಸೆಳೆಯುವ ಶಕ್ತಿ ಇದ್ದವರಿಗೆ ಅದ್ಯತೆ ನೀಡುತ್ತಿದೆ. ಸಂಘಟನೆಯ ವತಿಯಿಂದ 'ಪರಿಚಯ ವರ್ಗ'ಗಳನ್ನು ಆಯೋಜಿಸಿ, ಮುಖಂಡರ ಮನವರಿಕೆ ಮಾಡಲಾಗುತ್ತಿದೆ.
ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಕೆ.ಎಸ್.ಪ್ರಶಾಂತ್, 'ತಮಗೆ ಈ ಮೊದಲು ಬಜರಂಗದಳದಲ್ಲಿ ಸ್ನೇಹಿತರಿದ್ದರು. ಅವರಿಂದ ಸಂಘದ ಸಂಪರ್ಕವಾಯಿತು. ಪರಿಚಯ ವರ್ಗವನ್ನು ಆಯೋಜಿಸಿ ತಮ್ಮನ್ನು ಆಹ್ವಾನಿಸಿದ್ದರು. ಅಲ್ಲಿ ಮನ ಪರಿವರ್ತನೆಯಾಗಿ ಬಿಜೆಪಿಯಲ್ಲಿ ತೊಡಗಿಸಿಕೊಳ್ಳಲು ಮುಂದಾದೆ' ಎಂದು ತಿಳಿಸಿದರು.

ಶಿವಮೊಗ್ಗವನ್ನು ಬಿಜೆಪಿ ಭದ್ರಕೋಟೆ ಮಾಡಲು ಶತಪ್ರಯತ್ನ
2023 ಚುನಾವಣೆ ವರ್ಷವಾಗಿದೆ. ವಿಧಾನಸಭೆ ಚುನಾವಣೆ ಬೆನ್ನಿಗೆ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಇದರ ಹಿಂದೆಯೇ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದೆ. ಈ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿಯಲ್ಲಿ ಮುಖಂಡರ ಸೇರ್ಪಡೆಯಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿನ ತಮ್ಮ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಬಿಜೆಪಿ ಮುಖಂಡರು ಯೋಚಿಸುತ್ತಿದ್ದಾರೆ.