'ಜನಾರ್ದನ ಪೂಜಾರಿಯವರ ಆತ್ಮಚರಿತ್ರೆ ಪಾಪದ ಕೊಡ'
ಶಿವಮೊಗ್ಗ, ಜನವರಿ 28 : 'ಸಾಲ ಮೇಳದ ಸಂಗ್ರಾಮ ಜನಾರ್ದನ ಪೂಜಾರಿ ಅವರ ಆತ್ಮ ಚರಿತ್ರೆಯಲ್ಲ. ಪೂಜಾರಿಯವರ ಪಾಪದ ಕೊಡ' ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಸೊರಬದಲ್ಲಿ ಮಾತನಾಡಿದ ಅವರು, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಬಗ್ಗೆ ಪುಸ್ತಕದಲ್ಲಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು. 'ಪುಸ್ತಕ ಪೂಜಾರಿಯವರ ಪಾಪದ ಕೊಡ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಬಂಗಾರಪ್ಪ ಅವರು ಇಂದಿರಾ ಗಾಂಧಿಯವರನ್ನು ನಿಂದಿಸಿ ಹಲ್ಲೆಗೆ ಮುಂದಾಗಿದ್ದರು ಎಂಬ ತಪ್ಪು ಸಂದೇಶ ನೀಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ' ಎಂದು ಸ್ಪಷ್ಟನೆ ನೀಡಿದರು.
'ಇಂತಹ ತಪ್ಪು ಮಾಹಿತಿ ನೀಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶರವಾನೆ ಮಾಡಿದ್ದಾರೆ. ಬಂಗಾರಪ್ಪ ಅಭಿಮಾನಿಗಳಿಂದ ಜನಾರ್ದನ ಪೂಜಾರಿ ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತದೆ' ಎಂದು ಮಧು ಬಂಗಾರಪ್ಪ ಹೇಳಿದರು.
'ಸಾಲ ಮೇಳದ ಸಂಗ್ರಾಮ ಪುಸ್ತಕ ಸುಳ್ಳಿನ ಕಂತೆ. ಜನರ್ದಾನ ಪೂಜಾರಿ ಇವತ್ತು ಯಾವ ಸ್ಥಿತಿಯಲ್ಲಿ ಇದಾರೋ ಗೊತ್ತಿಲ್ಲ?. ಅರಳು ಮರಳು ಪರಿಸ್ಥಿತಿಯಲ್ಲಿ ಇರಬಹುದು' ಎಂದು ಮಧು ಬಂಗಾರಪ್ಪ ಟೀಕಿಸಿದರು.
ಜನವರಿ 26ರಂದು ಜನಾರ್ದನ ಪೂಜಾರಿ ಆತ್ಮ ಚರಿತ್ರೆ ಬಿಡುಗಡೆಯಾಗಿದೆ. ಪೂಜಾರಿ ಅವರ ರಾಜಕೀಯ ಜೀವನದ ಏಳು-ಬೀಳು ಸೇರಿದಂತೆ ವಿವಿಧ ವಿಚಾರಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications