Lok Sabha Election: ಶಿವಮೊಗ್ಗದಲ್ಲಿ ಈ ಬಾರಿ ಪ್ರತಿಷ್ಠೆಯ ಕದನ!
ಶಿವಮೊಗ್ಗ, ಮಾರ್ಚ್ 11: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಲೋಕಸಭೆ ಚುನಾವಣೆ ಕಣ ಬಹುತೇಕ ಅಂತಿಮವಾಗಿದೆ. ಬೈಂದೂರನ್ನು ಒಳಗೊಂಡಿರುವ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್. ಮತ್ತೊಮ್ಮೆ ಯಡಿಯೂರಪ್ಪ, ಎಸ್. ಬಂಗಾರಪ್ಪ ಕುಟುಂಬದ ಪ್ರತಿಷ್ಠೆಗೆ ಚುನಾವಣೆ ಸಾಕ್ಷಿಯಾಗಲಿದೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಕಣಕ್ಕಿಳಿಯುವುದು ಖಚಿತ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಎದುರಾಳಿ. ಆದರೆ ಚುನಾವಣಾ ಪ್ರತಿಷ್ಠೆ ಅಡಗಿರುವುದು ಸಚಿವ ಮಧು ಬಂಗಾರಪ್ಪ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರದ್ದು.

2004 ರಿಂದ 2024ರ ತನಕ ಬಿಜೆಪಿ ಶಿವಮೊಗ್ಗದಲ್ಲಿ ಬಲಿಷ್ಠವಾಗಿ ಬೆಳೆದಿದೆ. ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ತುಂಬಿದರು. ಬಳಿಕ ಬಿ. ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಿದರು. ಈಗ ಶಿವಮೊಗ್ಗ ಬಿಜೆಪಿ ಭದ್ರಕೋಟೆ.
ಇಬ್ಬರ ಪ್ರತಿಷ್ಠೆ ಅಡಗಿದೆ: ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆಯೇ ಶಿವಮೊಗ್ಗದ ಚುನಾವಣೆ ಕುತೂಹಲ ಹುಟ್ಟಿಸಿತ್ತು. ಗೀತಾ ಶಿವರಾಜ್ ಕುಮಾರ್ ಹೆಸರು ಕಾಂಗ್ರೆಸ್‌ನಿಂದ ಘೋಷಣೆಯಾಗುತ್ತಿದ್ದಂತೆಯೇ ಮತ್ತೆ ಯಡಿಯೂರಪ್ಪ, ಬಂಗಾರಪ್ಪ ಕುಟುಂಬದ ಫೈಟ್ ಎಂಬುದು ಖಾತ್ರಿ ಆಯಿತು.
2009ರಲ್ಲಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಮೊದಲ ಚುನಾವಣೆಯಲ್ಲಿಯೇ ಎಸ್. ಬಂಗಾರಪ್ಪ ವಿರುದ್ಧ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯ ಹೋರಾಟಕ್ಕೆ ಮುನ್ನುಡಿ ಬರೆದರು.
2014ರಲ್ಲಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್‌ನಿಂದ ಕಣಕ್ಕಿಳಿದರು. ಎದುರಾಳಿಯಾಗಿದ್ದು ಬಿ. ಎಸ್. ಯಡಿಯೂರಪ್ಪ. ಚುನಾವಣೆಯಲ್ಲಿ 3,65,580 ಮತಗಳ ಅಂತದಲ್ಲಿ ಗೀತಾ ಶಿವರಾಜ್ ಕುಮಾರ್ ಸೋತರು. ಮತ್ತೆ ಯಡಿಯೂರಪ್ಪ ಕುಟುಂಬ ಮೇಲುಗೈ ಆಯಿತು.
2018ರ ಉಪ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪರನ್ನು 50 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದರು. ಈ ಮೂಲಕ ಬಂಗಾರಪ್ಪ, ಬಂಗಾರಪ್ಪ ಪುತ್ರಿ ಗೀತಾ, ಪುತ್ರ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಸೋಲು ಕಂಡರು.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಪುನಃ ಯಡಿಯೂರಪ್ಪ ಪುತ್ರ ರಾಘವೇಂದ್ರ ಎದುರಾಳಿಯಾದರು. 2,23,360 ಮತಗಳ ಅಂತರದಲ್ಲಿ ಮಧು ಬಂಗಾರದಪ್ಪ ಸೋತರು.
ಈಗ ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದಾರೆ. ಸೊರಬ ಕ್ಷೇತ್ರದ ಶಾಸಕರು. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಹಾಲಿ ಸಂಸದರು ಬಿ. ವೈ. ರಾಘವೇಂದ್ರ, ಬಿಜೆಪಿಯ ರಾಜ್ಯಾಧ್ಯಕ್ಷರು ಬಿ. ವೈ. ವಿಜಯೇಂದ್ರ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ಶಾಸಕರು ಇದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಪ್ರಭಾವ, ರಾಘವೇಂದ್ರ ಮಾಡಿದ ಕೆಲಸಗಳು ಎಲ್ಲವೂ ಸೇರಿ ಚುನಾವಣಾ ಕಣ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರವಿದೆ. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರು. ಆದ್ದರಿಂದ ಸಹೋದರಿ ಗೆಲ್ಲಿಸುವ ಸವಾಲು ಅವರ ಮುಂದಿದೆ. ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿ ಬದಲಾವಣೆ ಪ್ರಯೋಗ ಮಾಡುತ್ತಿರುವ ಕಾಂಗ್ರೆಸ್‌ಗೆ ಶಿವಮೊಗ್ಗ ಸಿಕ್ಕಿಲ್ಲ. ಈ ಬಾರಿ ಕ್ಷೇತ್ರ ವಶವಾಗಲೇ ಬೇಕು ಎಂದು ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಸಿ ಪಕ್ಷ ತಂತ್ರ ರೂಪಿಸಿದೆ.












Click it and Unblock the Notifications