ಒಂದೇ ಪಕ್ಷದಿಂದ 10ನೇ ಚುನಾವಣೆ; ಆರಗ ಜ್ಞಾನೇಂದ್ರ ಮತದಾನ
ಶಿವಮೊಗ್ಗ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಪ್ರಗತಿಯಲ್ಲಿದೆ. ಜನರು ಉತ್ಸಾಹದಿಂದ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದ್ದು, ಅರ್ಹರು ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಮತದಾನ ಮಾಡಿದರು. ಒಂದೇ ಪಕ್ಷದಿಂದ 10ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅವರು ಹೊಸ ದಾಖಲೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಗೆ ಸಹ ಅವರು ತೀರ್ಥಹಳ್ಳಿಯ ಬಿಜೆಪಿ ಅಭ್ಯರ್ಥಿ.

ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದಲ್ಲಿರುವ ಸರ್ಕಾರಿ ಶಾಲೆಗೆ ಕುಟುಂಬದವರ ಜೊತೆ ಆಗಮಿಸಿದ ಆರಗ ಜ್ಞಾನೇಂದ್ರ ತಮ್ಮ ಹಕ್ಕು ಚಲಾವಣೆ ಮಾಡಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.
74 ಅಭ್ಯರ್ಥಿಗಳು ಕಣದಲ್ಲಿ; ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಸೊರಬ, ಭದ್ರಾವತಿ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ 728886 ಪುರುಷ, 743713 ಮಹಿಳಾ, 32 ಇತರೆ ಸೇರಿ ಒಟ್ಟು 1473327 ಮತದಾರರಿದ್ದಾರೆ.

ರಾಜ್ಯದಲ್ಲಿಯೇ ಅತಿ ಕಡಿಮೆ ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರದಲ್ಲಿ ತೀರ್ಥಹಳ್ಳಿಯೂ ಒಂದು. ಕ್ಷೇತ್ರದಲ್ಲಿ ಪ್ರಮುಖ ಮೂರು ಪಕ್ಷಗಳು ಮತ್ತು ಎಎಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಬ್ಬರು ಪಕ್ಷೇತರ ಅಭ್ಯರ್ಥಿ ಸಹ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಶಿವಮೊಗ್ಗ ಗ್ರಾಮಾಂತರದಲ್ಲಿ 11, ಭದ್ರಾವತಿಯಲ್ಲಿ 14, ಶಿವಮೊಗ್ಗ ನಗರದಲ್ಲಿ 15, ತೀರ್ಥಹಳ್ಳಿಯಲ್ಲಿ 5, ಶಿಕಾರಿಪುರದಲ್ಲಿ 10, ಸೊರಬದಲ್ಲಿ 10 ಮತ್ತು ಸಾಗರದಲ್ಲಿ 9 ಅಭ್ಯರ್ಥಿಗಳ ಸೇರಿ 74 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ 1775 + 7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.












Click it and Unblock the Notifications