ಭಾಷೆ ವಿಷಯದಲ್ಲಿ ತಮಿಳಿಗರನ್ನು ಅನುಸರಿಸುವ ಅಗತ್ಯವಿದೆ: ಹಂಸಲೇಖ
ಶಿವಮೊಗ್ಗ, ಜೂನ್ 15: ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧಿಸಿ ಕನ್ನಡ ಸಂಘಟನೆಗಳು ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಆಯೋಜಿಸಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಚಾಲನೆ ನೀಡಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಿರುವುದನ್ನು ಬುಧವಾರ ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿಗೆ ಪಾದಾಯಾತ್ರೆ ಕೈಗೊಳ್ಳಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಸಮಾಧಿಗೆ ನಮನ ಸಲ್ಲಿಸಿ 18 ಕಿಮೀ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಕುವೆಂಪುಗೆ ಅವಮಾನ ಮಾಡಿರುವ ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು, ಮತ್ತು ಪಠ್ಯ ಪರಿಷ್ಕರಣೆಯಲ್ಲಿ ವಿವಾದಕ್ಕೆ ನೇರ ಕಾರಣರಾದ ಶಿಕ್ಷಣ ಸಚಿವ ಬಿಸಿ ನಾಗೇಶ್‌ರನ್ನು ಸಚಿವ ಸಂಪುಟಿಂದ ಕೈಬಿಡಬೇಕೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಒತ್ತಾಯಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಹಲವು ಸಾಹಿತಿಗಳು, ವಿವಿಧ ಸಂಘಟನೆಗಳ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಹಿಂದೆ ಗೋಕಾಕ್, ಈಗ ಕುಪ್ಪಳ್ಳಿ ಕಹಳೆ
ಪಾದಯಾತ್ರೆಗೆ ಚಾಲನೆ ನೀಡದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, "ನಮ್ಮ ನಾಡೇ ಒಂದು ಧ್ವಜ. ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ. ಕನ್ನಡದ ನಡು ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ಭಾಷೆ ವಿಷಯ ಬಂದಾಗ ನಾವು ತಮಿಳರನ್ನು ಅನುಸರಿಸಿ ಹೋರಾಟ ಮಾಡಬೇಕಿದೆ. ಅಲ್ಲಿ ಭಾಷಗೆ ಕೊಂಚ ಎಡವಟ್ಟಾದರೂ ಆಡಳಿತ ಮತ್ತು ವಿರೋಧ ಪಕ್ಷ ಎಲ್ಲರೂ ಒಟ್ಟಾಗಿ ಸೇರಿಬಿಡುತ್ತಾರೆ.
ಬಸವ ಅಂದರೆ ಕನ್ನಡ, ಕುವೆಂಪು ಅಂದರೆ ಕನ್ನಡ, ಬಸವ ಅಂದರೆ ಕರುನಾಡು, ಕುವೆಂಪು ಅಂದರೆ ಕರ್ನಾಟಕ, ಇವರಿಬ್ಬರಿಗೆ ಅವಮಾನ ಆದ ಮೇಲೆ ನಾವಿಲ್ಲಿದ್ದು ಏನು ಮಾಡಬೇಕು. ನಾಡಗೀತೆ, ನಾಡಧ್ವಜಕ್ಕೆ ಅಪಮಾನವಾಗಿ ಕನ್ನಡಕ್ಕೆ ಕುತ್ತು ಬಂದಿದೆ, ಇನ್ನೂ ಸುಮ್ಮನಿರುವುದೇಗೆ. ಈ ಹಿಂದೆ ಗೋಕಾಕ್ ಚಳವಳಿ ನಡೆಸಿದ್ದೆವು. ಈಗ ಕುಪ್ಪಳಿ ಕಹಳೆ ಊದಿದ್ದೇವೆ, ಇದು ನಾಡಿನಾದ್ಯಂತ ಮೊಳಗಲಿದೆ " ಎಂದು ಹಂಸಲೇಖ ತಿಳಿಸಿದರು.

ನಾಡಗೀತೆ ತಿರುಚಿದವರಿಂದ ಪಠ್ಯ ಪರಿಷ್ಕರಣೆ
ಪಠ್ಯಕ್ರಮ ಪರಿಷ್ಕರಣಗೆ ಸರಕಾರ ಅನಧಿಕೃತ ನೇಮಕಾತಿ ಮಾಡಿದೆ. ಆದೇಶವನ್ನು ಉಲ್ಲಂಘಿಸಿ ಮಾಡಿದ ಅಕ್ರಮ ಪಠ್ಯಪರಿಷ್ಕರಣೆಯನ್ನು ಈ ಸರಕಾರ ಸಕ್ರಮಗೊಳಿಸಿದ ರೀತಿಯಿಂದ ಇಡೀ ಕನ್ನಡ ಪ್ರಜೆಗೆ ಅಪಮಾನವಾಗಿದೆ. ನಾಡಿನ ಕನ್ನಡ ಪ್ರಜೆ, ಭಾರತ ಸಂಕೇತವಾದ ನಾಡಗೀತೆಯಾದ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ನುಡಿಯನ್ನು ತಿರುಚಿರುವುದು ಬರೀ ರಾಷ್ಟ್ರಕವಿಗಲ್ಲ, ಇಡೀ ಕನ್ನಡಕ್ಕೆ ಮಾಡಿದ ಅವಮಾನ. ಅಂತಹ ವ್ಯಕ್ತಿಯನ್ನು ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದು, ಸರಕಾರದ ಬೇಜವಾಬ್ದಾರಿ ನಡೆ ಎಂದು ಸಾಹಿತಿ ಎಸ್‌ಜಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಳೆಯ ಪಠ್ಯ ಮುಂದುವರಿಸಲು ಸಲಹೆ
ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳುವ ಶಿಕ್ಷಣವನ್ನು ಮಕ್ಕಳಿಗೆ ಕೊಡುವುದನ್ನು ಬಿಟ್ಟು , ದೇಶಭಕ್ತಿಯ ಹೆಸರಿನಲ್ಲಿ ದ್ವೇಷವನ್ನು ಪ್ರಚೋದಿಸುವ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಹೋರಾಟ ಪಕ್ಷಾತೀತಾವಾಗಿ ನಡೆಯುತ್ತಿದೆ. ಕುವೆಂಪು ಕನ್ನಡ ನಾಡಿಗಷ್ಟೇ ಅಲ್ಲ, ಭಾರತದ ಪ್ರಜ್ಞೆಯ ಪ್ರತೀಕ, ಸರಕಾರಕ್ಕೆ ನಿಜವಾಗಲೂ ಆತ್ಮಸಾಕ್ಷಿ ಎನ್ನುವುದಿದ್ದರೆ, ಪಠ್ಯವನ್ನು ಹಿಂಪಡೆದು ಹಳೆಯದನ್ನೇ ಮುಂದುವರಿಸಲಿ. ನಂತರ ಶಿಕ್ಷಣ ತಜ್ಞರನ್ನು ನೇಮಕ ಮಾಡಿ ಪರಿಷ್ಕರಣೆಗೆ ಮುಂದಾದರೆ, ಅದಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.

ತೀರ್ಥಹಳ್ಳಿ ಪಾದಾಯಾತ್ರೆಗೆ ಡಿಕೆಶಿ-ಸಿದ್ದರಾಮಯ್ಯ
ಕುಪ್ಪಳ್ಳಿಯಿಂದ ಆರಂಭವಾಗಿರುವ ಈ ಪಾದಯಾತ್ರೆಯ ಸಮಾರೋಪ ಸಮಾರಂಭ ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಅವರಿಬ್ಬರು ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಆಗಮಿಸಿದ್ದಾರೆ. ಮತ್ತೆ ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.












Click it and Unblock the Notifications