ಶಿವಮೊಗ್ಗ: ತುಂಗಾ ಡ್ಯಾಂ ನೀರು ಬಿಡುಗಡೆ, ಜನರಿಗೆ ಎಚ್ಚರಿಕೆ
ಶಿವಮೊಗ್ಗ, ಮೇ 27: ಪೂರ್ವ ಮುಂಗಾರು ಮಳೆಯ ಆರ್ಭಟಕ್ಕೆ ಶಿವಮೊಗ್ಗ ಸಮೀಪದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಭರ್ತಿಯಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಡ್ಯಾಂಗೆ ಒಳ ಹರಿವು ಹೆಚ್ಚಲಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಸದ್ಯ ಸುಮಾರು 2,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಬಹುಬೇಗ ಭರ್ತಿಯಾಗುವ ಡ್ಯಾಂ ಇದು. ರಾಜ್ಯದ ಚಿಕ್ಕ ಹಾಗೂ ಮೊದಲು ಭರ್ತಿಯಾಗುವ ಡ್ಯಾಂ ಎಂದು ತುಂಗಾ ಡ್ಯಾಂನ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿಗಳು.

ಪ್ರಕಟಣೆ ಮೂಲಕ ಮನವಿ: ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿರುತ್ತದೆ.
ಆದ್ದರಿಂದ ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡಬಾರದೆಂದು ಎಂದು ಮಾಹಿತಿ ನೀಡಲಾಗಿದೆ.
ತುಂಗಾ ನದಿಯ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ತುಂಗಾ ಡ್ಯಾಂ ಇದೆ. ಚಿಕ್ಕಮಗಳೂರು ಜಿಲ್ಲೆ ಮೂಲಕ ಹರಿದು ಬರುವ ತುಂಗಾ ನದಿಗೆ ಇಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಶೃಂಗೇರಿ, ತೀರ್ಥಹಳ್ಳಿ, ಆಗುಂಬೆ ಭಾಗದಲ್ಲಿ ಹೆಚ್ಚಿನ ಮಳೆಯಾದರೆ ನದಿಯ ನೀರಿನ ಮಟ್ಟ ಏರಿಕೆಯಾಗಿ ಡ್ಯಾಂ ಬೇಗ ಭರ್ತಿಯಾಗುತ್ತದೆ.
ಗಾಜನೂರಿನ ತುಂಗಾ ಡ್ಯಾಂನಿಂದ ಬಿಟ್ಟ ನೀರು ಶಿವಮೊಗ್ಗ ನಗರದ ಮೂಲಕ ಸಾಗಿ ಕೂಡಲಿಯಲ್ಲಿ ಭದ್ರಾ ನದಿಯನ್ನು ಸೇರುತ್ತದೆ. ಬಳಿಕ ತುಂಗಭದ್ರಾ ಆಗಿ ದಾವಣಗೆರೆ, ಹಾವೇರಿ ಮೂಲಕ ಬಳ್ಳಾರಿಯ ತುಂಗಾಭದ್ರಾ ಡ್ಯಾಂಗೆ ಸೇರುತ್ತದೆ. ತುಂಗಾ ಜಲಾಶಯದ 3.24 ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ.
ಭಾನುವಾರವೇ ತುಂಗಾ ಡ್ಯಾಂಗೆ ಒಳಹರಿವು ಹೆಚ್ಚಳವಾಗಿತ್ತು. ಆಗ ಪವರ್ ಹೌಸ್ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಡ್ಯಾಂಗೆ ಸುಮಾರು 2,265 ಕ್ಯುಸೆಕ್ ಒಳಹರಿವು ಇದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಹರಿಸಲಾಗುತ್ತಿದೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿರುವ ಕಾರಣ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಆದ್ದರಿಂದ ಡ್ಯಾಂನಿಂದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಶಿವಮೊಗ್ಗ ನಗರ ಸೇರಿದಂತೆ ನದಿ ಪಾತ್ರದ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.
2024ರಲ್ಲಿ ಜೂನ್ 27ರಂದು ತುಂಗಾ ಡ್ಯಾಂ ಭರ್ತಿಯಾಗಿತ್ತು. 2 ಕ್ರೆಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸಲಾಗಿತ್ತು. ಕಳೆದ ಬಾರಿ ಡ್ಯಾಂ ಸಂಪೂರ್ಣ ಭರ್ತಿಯಾದ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹವಿತ್ತು. ಈ ಬಾರಿ ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಡ್ಯಾಂ ಬೇಗ ಭರ್ತಿಯಾಗಿದೆ.












Click it and Unblock the Notifications