ಶಿವಮೊಗ್ಗದಲ್ಲಿ ಮಂತ್ರಿ ಮಗನೇ ಕೇಸರಿ ಶಾಲು ಹಂಚಿಕೆ ಮಾಡಿದ್ದಾನೆ ಎಂದ ಡಿಕೆ ಶಿವಕುಮಾರ್
ಶಿವಮೊಗ್ಗ, ಫೆಬ್ರವರಿ 9: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ನಡುವೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿ ಮಗನೊಬ್ಬ ಕೋಟಿ ಕೋಟಿ ಶಾಲುಗಳನ್ನು ತರಿಸಿ ಹಂಚುವಂತಹ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಮತ್ತು ಸರ್ಕಾರಿ ಶಾಲೆ ಆವರಣದ ಕಂಬದ ಮೇಲೆ ಕೇಸರಿ ಧ್ವಜ ಹಾರಿಸಿದ ಘಟನೆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಮಂತ್ರಿ ಮಗನೇ ಕೇಸರಿ ಶಾಲುಗಳನ್ನು ತರಿಸಿ ಹಂಚಿದ್ದಾರೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಈ ಶಾಲುಗಳನ್ನು ಹಂಚುವುದಕ್ಕೆ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಬಂದ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಆದರೆ ಮಕ್ಕಳ ಮನಸ್ಸಿನಲ್ಲಿ ಏಕೆ ಇಂಥ ವಿಷಯಗಳನ್ನು ತುಂಬುತ್ತಿದ್ದೀರಿ. ಮಕ್ಕಳ ಮನಸ್ಥಿತಿಯನ್ನು ಏಕೆ ಹಾಳು ಮಾಡುತ್ತಿದ್ದೀರಾ. ಅನಗತ್ಯವಾಗಿ ಏಕೆ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದೀರಿ. ಮಕ್ಕಳಲ್ಲಿ ಜಾತಿ-ಧರ್ಮ ಎಂಬ ವಿಷಬೀಜ ಬಿತ್ತುವುದು ಏಕೆ ಬೇಕು ಎಂದು ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಎಲ್ಲ ಧರ್ಮಗಳನ್ನೂ ಗೌರವಿಸುವುದಕ್ಕೆ ನಾವು ಬದ್ಧ:
ರಾಜ್ಯದಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನಾವು ಆಡಿದ ಮಾತಿಗೆ ಬದ್ಧರಾಗಿದ್ದೇವೆ. ನಾನೊಬ್ಬ ಹಿಂದೂ ಆಗಿದ್ದು, ನಾನೇನು ಅರ್ಜಿ ಹಾಕಿಕೊಂಡು ಹುಟ್ಟಿದ್ದೀನಾ?, ಅವರವರ ಧರ್ಮಕ್ಕೆ ಅವರು ಗೌರವ ಕೊಡಲೇಬೇಕು. ನಾನು ದಿನ ಬೆಳಗಾದ್ರೆ ಹಣೆಯಲ್ಲಿ ಬೊಟ್ಟು ಇಡುತ್ತೇನೆ, ದೇವರಿಗೆ ನಮಸ್ಕಾರ ಹಾಕುತ್ತೇನೆ. ಕುಂಕುಮ, ಗಂಧ ಮತ್ತು ವಿಭೂತಿಯನ್ನು ಇಟ್ಟುಕೊಳ್ಳುತ್ತೇನೆ. ಕೆಲವರು ನೀನು ಕುಂಕುಮ ಇಟ್ಟುಕೊಳ್ಳಬೇಡ, ವಿಭೂತಿ ಇಟ್ಟುಕೊಳ್ಳಬೇಡ, ಓಲೆ ಹಾಕಿಕೊಳ್ಳಬೇಡ, ನೀನು ಮೂಗುತಿ ಹಾಕಿಕೊಳ್ಳಬೇಡ ಎಂದರೆ ಅದು ಹೇಗಾಗುತ್ತದೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಷ್ಟ್ರಧ್ವಜ ದೇಶದ ಆಸ್ತಿ:
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಧ್ವಜಸ್ತಂಭ ಎನ್ನುವುದು ಸರ್ಕಾರದ ಒಂದು ಆಸ್ತಿ, ಆ ಕಂಬದ ಮೇಲೆ ಎಲ್ಲಾ ಧ್ವಜಗಳನ್ನು ಹಾರಿಸುವುದಕ್ಕೆ ಆಗುವುದಿಲ್ಲ. ತಲೆ ಕಾಣಬೇಕಾದರೆ ಕೈ-ಕಾಲುಗಳು ಇರಬೇಕಲ್ಲವೇ. ಕಂಬ ಬೇರೆ, ಧ್ವಜ ಬೇರೆನಾ ಅದು ಬುನಾದಿ ಇದ್ದಂತೆ. ಎಲ್ಲಾ ಧ್ವಜಗಳನ್ನು ಎಲ್ಲಾ ಸ್ಥಳಗಳಲ್ಲೂ ಹಾರಿಸುವುದಕ್ಕೆ ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿದ ವಿವಾದಕ್ಕೆ ಸ್ಪಷ್ಟನೆ:
ಶಿವಮೊಗ್ಗದ ಶಾಲೆ ಆವರಣದಲ್ಲಿದ್ದ ಧ್ವಜ ಕಂಬದ ಮೇಲೆ ಕೇಸರಿ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮೀ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಕೇಸರಿ ಧ್ವಜವನ್ನು ಹಾರಿಸುವುದಕ್ಕೂ ಮೊದಲು ಕಂಬದಲ್ಲಿ ರಾಷ್ಟ್ರಧ್ವಜ ಇರಲಿಲ್ಲ. ಶಾಲೆ ಆವರಣದಲ್ಲಿನ ಧ್ವಜ ಕಂಬವು ಖಾಲಿಯಾಗಿತ್ತು. ತದನಂತರ ಹಾರಿಸಿದ ಕೇಸರಿ ಧ್ವಜವನ್ನು ತೆಗೆದು ಹಾಕಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಬಿ ಎಂ ಲಕ್ಷ್ಮೀ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ಶಿವಮೊಗ್ಗ ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ NSUI ವಿದ್ಯಾರ್ಥಿ ಸಂಘಟನೆ ವತಿಯಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ಬೆಳಗ್ಗೆ ತ್ರಿವರ್ಣ ಧ್ವಜಾರೋಹಣ ಮಾಡಿ, ಗೌರವ ಸಲ್ಲಿಸಲಾಯಿತು. ಇದೇ ವೇಳೆ NSUI ಸಂಘಟನೆ ಕಾರ್ಯಕರ್ತರು ಬೆಳಗ್ಗೆ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದರು.












Click it and Unblock the Notifications