ಬಿಎಸ್‌ವೈ ಒತ್ತಡಕ್ಕೆ ಮಣಿದ ಅಮಿತ್ ಶಾ, ಮತ್ತೆ ಪ್ರಚಾರಕ್ಕೆ ರೆಡ್ಡಿ
ಶಿವಮೊಗ್ಗ, ಮೇ 02: ಜನಾರ್ದನ ರೆಡ್ಡಿ ಅವರು ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರ ಅವಶ್ಯಕತೆ ಯಾವ ಯಾವ ಕ್ಷೇತ್ರಗಳಲ್ಲಿ ಇದೆಯೋ ಅಲ್ಲೆಲ್ಲಾ ಜನಾರ್ದನ ರೆಡ್ಡಿ ಬಹಿರಂಗ ಪರಚಾರವನ್ನೇ ಮಾಡುತ್ತಾರೆ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಬಹಿರಂಗ ಪ್ರಚಾರ ಮಾಡುತ್ತಿದ್ದ ಜನಾರ್ದನ ರೆಡ್ಡಿ ಅವರಿಗೆ ಬಹಿರಂಗ ಪ್ರಚಾರ ಮಾಡದಂತೆ ಹೈಕಮಾಂಡ್ ಸೂಚಿಸಿತ್ತು ಹಾಗಾಗಿ ಅವರು ಕೆಲವು ದಿನಗಳಿಂದ ಬಹಿರಂಗ ಪ್ರಚಾರದಿಂದ ಹಿಂದೆ ಸರಿದಿದ್ದರು. ಆದರೆ ಈಗ ಯಡಿಯೂರಪ್ಪ ಅವರು ಹೇಳುವ ಪ್ರಕಾರ ಜನಾರ್ದನ ರೆಡ್ಡಿಗೆ ಬಹಿರಂಗ ಪ್ರಚಾರ ಮಾಡಲು ಗ್ರೀನ್ ಸಿಕ್ಕಿದೆಯಂತೆ.

ಈ ಹಿಂದೆ ಅಮಿತ್ ಶಾ ಅವರು ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದರು, ಆದರೆ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ಮುಖಂಡರು ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಒತ್ತಡ ಹೇರಿದ್ದರು.
ಕೆಲವು ದಿನಗಳ ಹಿಂದೆಯಷ್ಟೆ ಜನಾರ್ದನ ರೆಡ್ಡಿಯನ್ನು ಪ್ರಚಾರಕ್ಕೆ ಬಾರದಂತೆ ಹೇಳಿ ಈಗ ಹಠಾತ್ತನೆ ನಿರ್ಧಾರ ಬದಲಿಸಿರುವ ಹಿಂದೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಒತ್ತಡ ಜೋರಾಗಿ ಇದೆ ಎನ್ನಲಾಗಿದೆ.
ಚುನಾವಣಾ ಪ್ರಚಾರಕ್ಕೆ ಜನಾರ್ದನ ರೆಡ್ಡಿಗೆ ಅವಕಾಶ ನೀಡಿರುವುದು ಮುಂದೆ ಜನಾರ್ದನ ರೆಡ್ಡಿ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಮುನ್ನುಡಿ ಎನ್ನಲಾಗುತ್ತಿದೆ.












Click it and Unblock the Notifications