ಹಸಿ ಶುಂಠಿ ಖರೀದಿ: ಶಿವಮೊಗ್ಗದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಜಿಲ್ಲಾಧಿಕಾರಿಗಳು
ಶಿವಮೊಗ್ಗ, ಏಪ್ರಿಲ್ 27: ಶಿವಮೊಗ್ಗ ಜಿಲ್ಲೆಯಲ್ಲಿ ಶುಂಠಿ ಬೆಳೆದ ರೈತರಿಗೆ ಜಿಲ್ಲಾಡಳಿತ ಗುಡ್‌ನ್ಯೂಸ್ ಕೊಟ್ಟಿದೆ. 2024-25ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿ ಶುಂಠಿ ಖರೀದಿ ಮಾಡಲು ಪ್ರತಿ ಕ್ವಿಂಟಾಲ್‌ಗೆ ಬೆಲೆ ಘೋಷಣೆ ಮಾಡಲಾಗಿದೆ. ಅಲ್ಲದೇ ಯೋಜನೆಯಡಿ ಹಸಿಶುಂಠಿ ಖರೀದಿಸಲು ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿಶುಂಠಿ ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ಶುಂಠಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ ರೂ. 2,445 ನಂತೆ ರೈತರಿಂದ ಹಸಿಶುಂಠಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯಾವ-ಯಾವ ತಾಲೂಕುಗಳು?; ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಶಿಕಾರಿಪುರ, ಹೊಸನಗರ ತೀರ್ಥಹಳ್ಳಿಯಲ್ಲಿ ಶುಂಠಿ ಬೆಳೆಯಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಯೋಜನೆಯ ಮಾರ್ಗಸೂಚಿಯನ್ವಯ ಮೈಸೂರು, ಹಾಸನ, ಹಾವೇರಿ, ಶಿವಮೊಗ್ಗ, ಬೀದರ್, ಚಿಕ್ಕಮಗಳೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರಿಂದ ಗರಿಷ್ಟ 59,948 ಮೆಟ್ರಿಕ್ ಟನ್ ಎಫ್‌ಎಕ್ಯೂ ಗುಣಮಟ್ಟದ ಹಸಿಶುಂಠಿ ಖರೀದಿಸಲಾಗುತ್ತದೆ.
ರಾಜ್ಯ ಸರ್ಕಾರದ ವತಿಯಿಂದ ಹಸಿಶುಂಠಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ನೇಮಕ ಮಾಡಲಾಗಿದೆ. ರೈತರ ನೋಂದಣಿ ಕಾರ್ಯದ ಜೊತೆ ಖರೀದಿ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಗುತ್ತದೆ. ಎಕರೆಗೆ 30 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಟ 60 ಕ್ವಿಂಟಾಲ್ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಹಸಿಶುಂಠಿ ಖರೀದಿಸಲಾಗುತ್ತದೆ. ಈ ಕೂಡಲೇ ರೈತರು ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ ಗರಿಷ್ಟ ರೂ. 611.25 ಅನ್ನು ನಿರ್ವಹಣಾ ವೆಚ್ಚ ನಿಗದಿಪಡಿಸಿದ್ದು, ಈ ಮಿತಿಗೊಳಪಟ್ಟು ನಿರ್ವಹಣಾ ವೆಚ್ಚದಲ್ಲಿಯೇ ಕೈಗೊಳ್ಳಬೇಕು. ಖರೀದಿ ಸಂಸ್ಥೆಯು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಮಧ್ಯಪ್ರವೇಶ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸದೃಢ ಪಿಎಸಿಎಸ್/ ವಿಎಸ್‌ಎಸ್‌ಎನ್/ ಎಫ್‌ಪಿಓ/ ಎಪಿಸಿಎಂಎಸ್ ಸಂಸ್ಥೆಗಳ ಮುಖಾಂತರ ಒಡಂಬಡಿಕೆ ಮಾಡಿಕೊಂಡು ಅಗತ್ಯಕ್ಕನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಬೇಕಿದೆ.
ಗ್ರಾಮ ಪಂಚಾಯಿತಿಗಳ ಮೂಲಕ ಹಾಗೂ ಇತರೆ ಮಾಧ್ಯಮಗಳ ಮೂಲಕ ರೈತರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಹಸಿಶುಂಠಿ ಶೇಖರಣೆ ಮಾಡಲು ಆಯಾ ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ಲಭ್ಯವಿರುವ ಶೀತಲಗೃಹವನ್ನು ಪರಿಶೀಲಿಸಿ ಖರೀದಿ ಪೂರ್ವದಲ್ಲಿಯದೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
ಎಫ್‌ಎಕ್ಯೂ ಗುಣಮಟ್ಟ ಖಾತ್ರಿಪಡಿಸಲು ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಮಂಡಳಿಯ ಪರಿಣಿತ ಅಧಿಕಾರಿಗಳನ್ನು ನಿಯೋಜಿಸಿ ಎಫ್‌ಎಕ್ಯೂ ಗುಣಮಟ್ಟವನ್ನು ದೃಢೀಕರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹಸಿ ಶುಂಠಿ ಖರೀದಿ ಪೂರ್ವದಲ್ಲಿ ರೈತರ ನೋಂದಣಿಯನ್ನು ನಿಯಮಾನುಸಾರ ಕೈಗೊಂಡು ಪಹಣಿಯಲ್ಲಿ 2024-25ನೇ ಸಾಲಿಗೆ ಬೆಳೆ ಸಮೀಕ್ಷೆ ದೃಢೀಕರಿಸಿ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕು. ಹಾಗೂ ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವು ಡಿಬಿಟಿ/ ಎನ್‌ಇಎಫ್‌ಟಿ/ ಆರ್‌ಟಿಜಿಎಸ್ ಮೂಲಕ ಜಮಾ ಆಗುವಂತೆ ಪಾವತಿ ಮಾಡಲಾಗುತ್ತದೆ.












Click it and Unblock the Notifications