ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಶಿವಮೊಗ್ಗ ಎಸ್‌ಪಿಗೆ ಭದ್ರಾವತಿ ಯುವಕನಿಂದ ಪತ್ರ
ಶಿವಮೊಗ್ಗ, ನವೆಂಬರ್, 26: ಮದುವೆಯಾಗಲು ವಧು ಹುಡುಕಿಕೊಡಿ ಎಂದು ಮ್ಯಾಟ್ರಿಮೋನಿಗೆ ಜಾತಕ ತಲುಪಿಸಿವುದು ಸಾಮಾನ್ಯವಾಗಿದೆ. ಆದರೆ ಭದ್ರವಾತಿಯ ಪ್ರವೀಣ್ ಎಂಬ ಯುವಕ ವಧು ಹುಡುಕಿಕೊಡುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ. ಈತ ಪೊಲೀಸರಿಗೆ ಸಲ್ಲಿಸಿರುವ ಅರ್ಜಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕಾರ್ಗಲ್: ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ, ಹಣಕ್ಕೆ ಬೆಂಕಿಯಿಟ್ಟ ಪಟ್ಟಣ ಪಂಚಾಯಿತಿ ಸದಸ್ಯ
ಭದ್ರಾವತಿಯ ಪ್ರವೀಣ್ ಎಂಬಾತ ವಧು ಹುಡುಕಿಕೊಡುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಮಾಡಿದ್ದಾನೆ. ಮನವಿ ಪತ್ರದ ಜೊತೆಗೆ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುವುದಾಗಿ ತಿಳಿಸಿದ್ದಾನೆ. ವಧು ಅನ್ವೇಷಣೆಯ ಮನವಿ ಪತ್ರದಲ್ಲಿ ಪ್ರವೀಣ್ ತನ್ನ ಹಿನ್ನೆಲೆಯನ್ನು ತಿಳಿಸಿದ್ದಾನೆ. 'ತಮ್ಮ ತಂದೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಇದೀಗ ತಂದೆ ತೀರಿಕೊಂಡಿದ್ದು, ತಾಯಿ ಒಬ್ಬರೇ ಇದ್ದಾರೆ. ಹಾಗೂ ಅಣ್ಣನಿಗೆ ಈಗಾಗಲೇ ಮದುವೆಯಾಗಿದೆ.' ಎಂದು ತಿಳಿಸಿದ್ದಾನೆ.
ವಧು ಹುಡುಕಿಕೊಡುವಂತೆ ಮನವಿ ಸಲ್ಲಿಕೆ
ಇನ್ನು 'ತಾನು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಬಳಿಕ ಚಿಟ್ಸ್ ಫಂಡ್ಸ್ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ನಿರ್ವಹಿಸಿದ್ದೇನೆ. ಈಗ ಭದ್ರಾವತಿಯಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿಹೋಗದ ಹಿನ್ನೆಲೆ ನಮ್ಮ ಜಾತಿಗೆ ಸಂಬಂಧಿಸಿದವರು, ತಮ್ಮ ಅಧೀನದಲ್ಲಿರುವ ಯಾರಾದರು ಇದ್ದರೆ ತಿಳಿಸಿ. ಈ ಮೂಲಕ ತಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಿ' ಎಂದು ಮನವಿ ಮಾಡಿದ್ದಾನೆ.

ಬೇಕಿದ್ದರೆ ಹಿನ್ನೆಲೆ ಪರಿಶೀಲಿಸಿಕೊಳ್ಳಿ
ಮನವಿ ಪತ್ರದ ಕೊನೆಯಲ್ಲಿ ಪ್ರವೀಣ್ ತನಗೆ ಪರಿಚಿತ ನಗರಸಭೆ ಸದಸ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಹೆಸರನ್ನು ಬರೆದಿದ್ದಾನೆ. 'ತನ್ನ ಹಿನ್ನೆಲೆ ಕುರಿತು ಮಾಹಿತಿ ಬೇಕಿದ್ದರೆ ಇವರನ್ನು ವಿಚಾರಿಸಬಹುದು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದ್ದು, ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿದುಕೊಳ್ಳಬಹುದು' ಎಂದು ತಿಳಿಸಿದ್ದಾನೆ. ನವೆಂಬರ್ 14ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಈ ಮನವಿ ಪತ್ರವನ್ನು ಪ್ರವೀಣ್ ತಲುಪಿಸಿದ್ದು, ಇದೀಗ ಇದು ಎಲ್ಲೆಡೆ ವೈರಲ್ ಆಗಿದೆ.