ನಾಳೆ ಇನ್ನೊಬ್ಬರು ಸಿಎಂ ಆಗಬಹುದು..ಗೌರವಪೂರ್ವಕವಾಗಿ ತನಿಖೆ ಎದುರಿಸಿ-ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಆಗಸ್ಟ್ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬಗ್ಗೆ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಾಕ್ ಸಮಯ ಜೋರಾಗಿದೆ.
ಇದೀಗ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಈ ಬಗ್ಗೆ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಬ್ರಾಹಂ, ಸ್ನೇಹಮಯಿ ಕೃಷ್ಣ ಖಾಸಗಿ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ಬೀದಿಯಲ್ಲಿ ಹೋಗುವವರು ದೂರು ಕೊಟ್ಟಿದ್ದಾರೆ ಎನ್ನುತ್ತಾರೆ. ಬೀದಿಯಲ್ಲಿ ಹೋಗುವವರೇ ಓಟು ಹಾಕಿದ್ದರಿಂದಲೇ ಇಂದು ನಿಮಗೆ ಅಧಿಕಾರ ಬಂದಿರುವುದು. ಇವತ್ತು ನಾಳೆ ಇನ್ನೊಬ್ಬರು ಮುಖ್ಯಮಂತ್ರಿ ಆಗಬಹುದು. ಆದರೆ ನೀವು ಗೌರವಪೂರ್ವಕವಾಗಿ ತನಿಖೆ ಎದುರಿಸಿ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ನಮ್ಮ ಬಿಜೆಪಿ ಕಾರ್ಯಕರ್ತರನ್ನು ದೇಶದ್ರೋಹಿಗಳು ಎನ್ನುತ್ತಾರೆ. ಆದರೆ ದೇಶದ್ರೋಹಿಗಳು ಯಾರು ಅಂತಾ ದೇಶದ ಜನ ನಿರ್ಧರಿಸಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಮಂತ್ರಿ ಆಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಆಪರೇಷನ್ ಕಮಲ ಬಗ್ಗೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವನ್ನು ಶಾಸಕ ರವಿಕುಮಾರ್ ಗಣಿಗ ಸ್ಪಷ್ಟವಾಗಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ನಮ್ಮ ನಾಯಕರು ಹೇಳಿದ್ದಾರೆ. ರವಿಕುಮಾರ್ ಗಣಿಗ ಅವರು ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಈ ರೀತಿ ಹೇಳಿದ್ದಾರೆ ಅಷ್ಟೇ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಭಾಷಣ ಮಾಡಿಕೊಂಡು ಅಧಿಕಾರಕ್ಕೆ ಬಂದವರು. ಇವರು ತಿಂದಿದ್ದಕ್ಕೆ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಮೃತ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇದುವರೆಗೆ ಪರಿಹಾರ ಕೊಟ್ಟಿಲ್ಲ. ಶೀಘ್ರವಾಗಿ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಶಿವಮೊಗ್ಗ ಸಂಸದರು ಆಗ್ರಹಿಸಿದರು.
ಜೋಗ ಜಲಪಾತದಲ್ಲಿ ಸದ್ಯ ದರ ಹೆಚ್ಚಳ ಮಾಡಿರುವ ಬಗ್ಗೆ ಮಾತನಾಡಿದ ಅವರು, ದರ ಹೆಚ್ಚಳ ಮಾಡುವುದು ತಪ್ಪಲ್ಲ. ಅಭಿವೃದ್ಧಿ ದೃಷ್ಟಿಯಿಂದ ದರ ಹೆಚ್ಚು ಮಾಡಿದ್ದಾರೆ. ಆದರೆ ಜೋಗ ಜಲಪಾತದಲ್ಲಿ ಈಗ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇನ್ನು 2-3 ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿ ಮುಗಿಯಲಿದೆ. ಅಲ್ಲಿ ಬರುವ ಪ್ರವಾಸಿಗರಿಗೆ ಹೋಟೆಲ್, ಶೌಚಾಲಯ ವ್ಯವಸ್ಥೆ ಇಲ್ಲ. ಇನ್ನು 2-3 ತಿಂಗಳಲ್ಲಿ ಹೋಟೆಲ್, ಶೌಚಾಲಯ ನಿರ್ಮಾಣ ಆಗಲಿದೆ. ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ದರ ಹೆಚ್ಚಳ ಮಾಡಬಹುದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.












Click it and Unblock the Notifications