ಸಾಗರ: ಬಂಡಾಯ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಕಣಕ್ಕೆ
ಸಾಗರ(ಶಿವಮೊಗ್ಗ), ಏಪ್ರಿಲ್ 19: ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ರಾಜಕೀಯ ತಾರಕಕ್ಕೇರಿ, ಬೇಳೂರು ಗೋಪಾಲಕೃಷ್ಣರಿಗೆ ಮಾರಕವಾಗಿದ್ದು ಎಲ್ಲರಿಗೂ ಗೊತ್ತೇ ಇದೆ.
ಭಾರತೀಯ ಜನತಾ ಪಕ್ಷದಿಂದ ಈ ಕ್ಷೇತ್ರದ ಟಿಕೆಟ್ ಹರತಾಳು ಹಾಲಪ್ಪ ಅವರಿಗೆ ಸಿಕ್ಕಿದೆ. ಇದರಿಂದ ಮನನೊಂದು ಕಣ್ಣೀರಿಟ್ಟಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಅವರು ಕೊನೆಗೆ ಬಂಡಾಯವೆದ್ದಿದ್ದಾರೆ.ಸಾಗರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದ್ದಾರೆ.

ಟಿಕೆಟ್ ಗಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲ ಕೃಷ್ಣ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಹರತಾಳು ಹಾಲಪ್ಪರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಗೋಪಾಲಕೃಷ್ಣ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು.
ಗೋಪಾಲಕೃಷ್ಣ ಅವರು ಬೆಂಬಲಿಗರ ಜತೆ ಸಭೆ ನಡೆಸಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಏಪ್ರಿಲ್ 22 ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಸಾಗರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಹರತಾಳು ಹಾಲಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬೇಳೂರು ಗೋಪಾಲಕೃಷ್ಣ ಕೂಡ ಸ್ಪರ್ಧಿಸುತ್ತಿರುವುದರಿಂದ ಚುನಾವಣಾ ಕಣ ರಂಗೇರಲಿದೆ.












Click it and Unblock the Notifications