ಅಕ್ರಮ ಆರೋಪ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮೇಲೆ ಇಡಿ ದಾಳಿ
ಶಿವಮೊಗ್ಗ, ಏಪ್ರಿಲ್ 08: ನಕಲಿ ಚಿನ್ನ ಅಡಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಶಿವಮೊಗ್ಗ, ಬೆಂಗಳೂರು ಸೇರಿ ಹಲವು ಕಡೆ ದಾಳಿ ನಡೆದಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಮ್ಯಾನೇಜರ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ ಗೌಡರಿಗೆ ಕ್ಲೀನ್ ಚಿನ್ ನೀಡಲಾಗಿತ್ತು. ಆದರೆ ಇಡಿ ಹೈಕೋರ್ಟ್ ಮೊರೆ ಹೋಗಿ ಮತ್ತೊಮ್ಮೆ ತನಿಖೆಯನ್ನು ಕೈಗೊಂಡಿದೆ.
ಮಂಗಳವಾರ ಶಿವಮೊಗ್ಗ ನಗರದಲ್ಲಿರುವ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಬ್ಯಾಂಕ್, ಗಾಂಧಿ ಬಜಾರ್ ಶಾಖೆಯ ಹಿಂದಿನ ಮ್ಯಾನೇಜರ್ ಶೋಭಾ ಅವರ ಶಿವಮೊಗ್ಗ ನಗರದ ನಿವಾಸ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮುಖ್ಯ ಶಾಖೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಶಿವಮೊಗ್ಗದ ಗಾಂಧಿ ಬಜಾರ್ ಶಾಖೆಯಲ್ಲಿ 11 ವರ್ಷಗಳ ಹಿಂದೆ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿಯನ್ನು ನಡೆಸಲಾಗಿದೆ. ಈ ಸಂಬಂಧ ಮೊದಲು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಎಸಿಬಿ ತನಿಖೆ ಕೂಡಾ ನಡೆದಿತ್ತು. ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಮಾಧ್ಯಮಗಳ ಪ್ರಕಾರ ಇಡಿ ಅಧಿಕಾರಿಗಳು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡರನ್ನು ಬೆಂಗಳೂರಿನ ಚಾಮರಾಜಪೇಟೆಯ ಡಿಸಿಸಿ ಬ್ಯಾಂಕ್ ಗೆಸ್ಟ್ ಹೌಸ್‌ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಪ್ರಕರಣದ ತನಿಖೆಯನ್ನು ಎಸಿಬಿ ನಡೆಸುವಾಗ ಮಂಜುನಾಥ ಗೌಡರನ್ನು ಬಂಧಿಸಲಾಗಿತ್ತು.
1997 ರಿಂದ 2020ರ ತನಕ ಸುಮಾರು ಆರ್. ಎಂ. ಮಂಜುನಾಥ ಗೌಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಗಾಂಧಿ ಬಜಾರ್ ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ನೀಡಲಾಗಿದೆ ಎಂಬುದು ಆರೋಪ. ಈ ಹಗರಣ ಸುಮಾರು 63 ಕೋಟಿ ರೂ.ಗಳದ್ದು ಎಂದು ಅಂದಾಜಿಸಲಾಗಿದೆ.
2014ರಲ್ಲಿ ಈ ಕುರಿತು ದೂರು ದಾಖಲಾಗಿ ವಿಚಾರಣೆ ಪ್ರಾರಂಭವಾಯಿತು. 2021ರಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಎಸಿಬಿ ತನಿಖೆಯಲ್ಲಿ ಮಂಜುನಾಥ ಗೌಡರ ಹೆಸರು ಕೈ ಬಿಡಲಾಗಿತ್ತು. ಆದರೆ ಇಡಿ ಇಸಿಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲು ಮುಂದಾಗಿತ್ತು.
ಆರ್. ಎಂ. ಮಂಜುನಾಥ ಗೌಡರಿಗೆ ಸಮನ್ಸ್ ಸಹ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಮಾರ್ಚ್ 28ರಂದು ಹೈಕೋರ್ಟ್ ಮಂಜುನಾಥ ಗೌಡರ ಅರ್ಜಿ ವಜಾಗೊಳಿಸಿತ್ತು. ಇಡಿ ವಿಚಾರಣೆಗೆ ಇದ್ದ ಕಾನೂನು ತಡೆಯನ್ನು ತೆರವು ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪ್ರಭಾವಿ ರಾಜಕೀಯ ನಾಯಕ ಆರ್. ಎಂ. ಮಂಜುನಾಥ ಗೌಡ. ಕೆಜೆಪಿ, ಜೆಡಿಎಸ್ ಪಕ್ಷದಲ್ಲಿದ್ದ ಅವರು 2021ರಲ್ಲಿ ಕಾಂಗ್ರೆಸ್ ಸೇರಿದ್ದರು. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಪ್ತ ಬಳಗದ ನಾಯಕರಲ್ಲಿ ಇವರು ಸಹ ಒಬ್ಬರು.












Click it and Unblock the Notifications