ವಿಡಿಯೋ; ಮುಂದಿನ ಚುನಾವಣೆ; ಕಾಂಗ್ರೆಸ್ ಬಗ್ಗೆಈಶ್ವರಪ್ಪ ಭವಿಷ್ಯ!
ಶಿವಮೊಗ್ಗ, ಏಪ್ರಿಲ್ 06; "ಸಂವಿಧಾನಿಕವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವಷ್ಟು ಸೀಟುಗಳನ್ನು ಸಹ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆಯುವುದಿಲ್ಲ" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಈಶ್ವರಪ್ಪ, "ಕಾಂಗ್ರೆಸ್ ನಾಯಕರು ಸಂವಿಧಾನ, ನ್ಯಾಯಾಲಯದ ತೀರ್ಪು ಧಿಕ್ಕರಿಸುವ ಜನರನ್ನು ಬೆಂಬಲಿಸುತ್ತಿದ್ದಾರೆ" ಎಂದು ದೂರಿದರು.
"ಒಂದು ವೇಳೆ ಕಾಂಗ್ರೆಸ್ ನಾಯಕರು ಇದೇ ರೀತಿ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಸಹ ಕುಳಿತುಕೊಳ್ಳಲು ಸಂವಿಧಾನಿಕವಾಗಿ ಬೇಕಾದಷ್ಟು ಸ್ಥಾನಗಳನ್ನು ಸಹ ಗಳಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.

"ಕಾಂಗ್ರೆಸ್ ನಾಯಕರಾದ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಧಿಕ್ಕರಿಸುವವರನ್ನು ಬೆಂಬಲಿಸುತ್ತಿದ್ದಾರೆ. ಈ ದೇಶದಲ್ಲಿ ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪು ಅತ್ಯುನ್ನತವಾದದ್ದು, ಎಲ್ಲರೂ ಅದನ್ನು ಪಾಲಿಸಬೇಕು" ಎಂದರು.
"ಹಿಜಾಬ್ ವಿವಾದದಲ್ಲಿ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಮುಸ್ಲಿಂಮರು ಬಂದ್ ನಡೆಸಿದರೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರು" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಆರೋಪಿಸಿದರು.
"ಈಗಾಗಲೇ ಕಾಂಗ್ರೆಸ್ ಹಲವಾರು ಚುನಾವಣೆಯಲ್ಲಿ ಸೋತಿದೆ. ಯಾರನ್ನು ಬೆಂಬಲಿಸಬೇಕು ಎಂದು ಪಕ್ಷ ತೀರ್ಮಾನಿಸಬೇಕು. ಇದೇ ರೀತಿ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಸೋಲು ಅನುಭವಿಸಲಿದ್ದಾರೆ" ಎಂದು ಈಶ್ವರಪ್ಪ ಹೇಳಿದರು.
ಅಜಾನ್ ವಿವಾದದ ಕುರಿತು ಮಾತನಾಡಿದ ಈಶ್ವರಪ್ಪ, "ಮಸೀದಿಗಳಲ್ಲಿ ಮೈಕ್‌ಗಳನ್ನು ಬೇರೆಯವರಿಗೆ ತೊಂದರೆಯಾಗದಂತೆ ಬಳಕೆ ಮಾಡಿದರೆ ಸಮಸ್ಯೆ ಇಲ್ಲ. ಈಗ ದೇವಾಲಯಗಳಲ್ಲಿ ಇದೇ ರೀತಿ ಬಳಕೆ ಮಾಡಲಾಗುತ್ತಿದೆ. ಕಾನೂನನ್ನು ಎಲ್ಲರೂ ಪಾಲಿಸಬೇಕು" ಎಂದು ಅಭಿಪ್ರಾಯಪಟ್ಟರು.












Click it and Unblock the Notifications