ಸಿದ್ದರಾಮಯ್ಯನವರ ತಲೆ ಕಡಿಯುವುದಾಗಿ ಬೆದರಿಕೆ ಹಾಕಿದ್ದ ಚನ್ನಬಸಪ್ಪ ಇದೀಗ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ
ಶಿವಮೊಗ್ಗ, ಏಪ್ರಿಲ್, 21: ರಾಜ್ಯ ವಿಧಾನಸಭೆ ಚುನಾವಣ ಕಣ ರಂಗೇರದ್ದು, ನಾಮಪತ್ರ ಸಲ್ಲಿಕೆಯ ದಿನಾಂಕವು ಈಗಾಗಲೇ ಮುಗಿದಿದೆ. ಸಾಮಾನ್ಯವಾಗಿ ತಮ್ಮ ಕ್ಷೇತ್ರದಲ್ಲಿ ಹೆಚ್ಚಾಗಿ ಜನಸಂಪರ್ಕದಲ್ಲಿರುವವರಿಗೆ ಪಕ್ಷಗಳು ಮಣೆ ಹಾಕುವುದನ್ನು ನೋಡಿದ್ದೇವೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ತಲೆ ಕಡಿತೀನಿ ಅಂತಾ ಹೇಳಿಕೆ ನೀಡಿದ ನಾಯಕನಿಗೆ ಬಿಜೆಪಿ ಅಭ್ಯರ್ಥಿ ಪಟ್ಟ ನೀಡಿ ಕುತೂಹಲ ಕೆರಳಿಸಿದೆ.
ಎಂಟು ವರ್ಷಗಳ ಹಿಂದೆ ಅಂದರೆ ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ವಿರುದ್ಧ ಪ್ರಚೋಧನಾತ್ಮಕ ಭಾಷಣ ಮಾಡಿದ ಕಾರಣ ಚನ್ನಬಸಪ್ಪ ಬಂಧನಕ್ಕೊಳಗಾಗಿದ್ದದ್ದರು. ಆದರೆ ಇದೀಗ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಅವರೇ ಕಣಕ್ಕಿಳಿದಿದ್ದಾರೆ.

ಬಿಜೆಪಿ ಪಕ್ಷವು ಏಪ್ರಿಲ್ 19ರ ಸಂಜೆ ಶಿವಮೊಗ್ಗದ ಅಭ್ಯರ್ಥಿಯಾಗಿ ಚನ್ನಬಸಪ್ಪ (59) ಹೆಸರನ್ನು ಘೋಷಿಸಿತು. ಅವರು ಏಪ್ರಿಲ್ 20 ರಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಜೊತೆಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಈಶ್ವರಪ್ಪನವರು ಏಪ್ರಿಲ್ 11ರಂದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಆಗಿನಿಂದ ಅವರು ತಮ್ಮ ಮಗ ಕೆ.ಇ.ಕಾಂತೇಶ್‌ಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದರು.
ಕೊನೆಗೂ ಬಿಜೆಪಿ ಮಾತ್ರ ಈಶ್ವರಪ್ಪನವರ ಮಗನನ್ನು ಬಿಟ್ಟು ಚನ್ನಬಸಪ್ಪಗೆ ಮಣೆ ಹಾಕಿದೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಚನ್ನಬಸಪ್ಪ ಮತ್ತು ಅವರ ಪತ್ನಿ ₹1.05 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಘೋಷಿಸಿದರು. ದಂಪತಿಗೆ ಮೂರು ದ್ವಿಚಕ್ರ ವಾಹನಗಳಿವೆ, ಆದರೆ ಕಾರು ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಲವು ಬಾರಿ ಚುನಾಯಿತರಾದ ಚನ್ನಬಸಪ್ಪ ಅವರು ಹಿಂದುತ್ವ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನವೆಂಬರ್ 2, 2015ರಂದು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೋಮಾಂಸ ಸೇವನೆಯ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದರು.
ಇದೇ ವೇಳೆ ಚನ್ನಬಸಪ್ಪ ಶಿವಮೊಗ್ಗದಲ್ಲಿ ಗೋಮಾಂಸ ಸೇವಿಸಲು ಧೈರ್ಯ ಮಾಡಿದರೆ ಸಿದ್ದರಾಮಯ್ಯನವರ ಶಿರಚ್ಛೇದ ಮಾಡುವುದಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದರು. ಆಗ ಶಿವಮೊಗ್ಗ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಶ್ವನಾಥ್ ದೊಡ್ಡಪೇಟೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಧರ್ಮದ ಆಧಾರದ ಮೇಲೆ ದ್ವೇಷ ಮತ್ತು ಬೆದರಿಕೆ ಮತ್ತಿತರ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷರಿಂದ ದೂರು ಪಡೆದ ಶಿವಮೊಗ್ಗ ಪೊಲೀಸರು ಚನ್ನಬಸಪ್ಪ ಅವರನ್ನು ನವೆಂಬರ್ 3 ರಂದು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಆದರು. ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಚನ್ನಬಸಪ್ಪ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು. ಅಲ್ಲದೆ ಚನ್ನಬಸಪ್ಪ ಹಿಂದುತ್ವವಾದಿ ಹರ್ಷನ ಹತ್ಯೆ ಮತ್ತು ಹಿಜಾಬ್ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಲದೇ ಇದೀಗ ಬಿಜೆಪಿ ಅವರಿಗೆ ಶಿವಮೊಗ್ಗದಿಂದ ಟಿಕೆಟ್ ಘೋಷಣೆ ಮಾಡಿ ಕುತೂಹಲ ಹುಟ್ಟುಹಾಕಿದೆ.
ಅಲ್ಲದೆ ಏಪ್ರಿಲ್ 21ರಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 60 ಸಾವಿರ ಮತಗಳ ಅಂತರದಿಂದ ಗೆಲ್ಲತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚನ್ನಬಸಪ್ಪ ಅವರು 9ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಅವರು ಹೆಚ್ಚಾಗಿ ಪ್ರತಿಭಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಈಶ್ವರಪ್ಪನವರು ತನ್ನ ಮಗನಿಗೆ ಇಲ್ಲ ಆಪ್ತರಿಗೆ ಟಿಕೆಟ್ ಕೊಡಿಸುವ ಲೆಕ್ಕಾಚಾರದಲ್ಲಿದ್ದರು. ಆದರೂ ಬಿಜೆಪಿ ಕೊನೆಗೂ ಈಶ್ವರಪ್ಪನವರು ಅಂದುಕೊಂಡಂತೆ ಆಪ್ತನಿಗೆ ಟಿಕೆಟ್ ನೀಡಿದ್ದು, ಶಿವಮೊಗ್ಗದಲ್ಲಿ ಎಲ್ಲಾವೂ ಈಶ್ವರಪ್ಪ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಪ್ರಚೋದನಾಕಾರಿ ಹೇಳಿಕೆ ನೀಡಿರುವವರನ್ನು ಅಭ್ಯರ್ಥಿ ಮಾಡಿರುವುದು ಕೂಡ ಜನರ ಕೆಂಗಣ್ಣಿಗೆ ಗುರಿ ಮಾಡಿಕೊಟ್ಟಂತಿದೆ.
ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಮತದಾರರ ಪ್ರಭುಗಳು ಕೊನೆಗೆ ಯಾರ ಕಡೆ ಒಲವು ತೋರಲಿದ್ದಾರೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications