ಕ್ಯಾನ್ಸರ್ ಗೆದ್ದ ಸಾಧಕಿ ಶಿವಮೊಗ್ಗದ ಶ್ರುತಿಯ ರೋಚಕ ಕಥೆ
ಶಿವಮೊಗ್ಗ, ಫೆಬ್ರವರಿ, 05: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರಾದ ಶ್ರುತಿಯವರು ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಗೆದ್ದು ಮಾಡಿದ ಸಾಧನೆಗಳು ಈಗಿನ ಯುವಜನತೆಗೆ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿ ನಿಲುವುದರಲ್ಲಿ ಯಾವುದೇ ಸಂಶಯವಿಲ್ಲ. ಜೀವ ಹಾಗೂ ಜೀವನದ ಮೌಲ್ಯವನ್ನು ಶ್ರುತಿಯವರ ಕಥೆ ಪರಿಣಾಮಕಾರಿಯಾಗಿ ಸಾರಿಹೇಳುತ್ತದೆ.
ಶ್ರುತಿಯವರು ಕಾಲೇಜು ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೋಮ ಓದುತ್ತಿರುವಾಗ ಒಂದು ದಿನ ಕುಳಿತಿದ್ದಾಗ ಆರಂಭದ ಕಾಲು ನೋವು ಮುಂದೆ ಮೂಳೆ ಕ್ಯಾನ್ಸರ್ ಎಂಬ ಮಹಾಮಾರಿಯಿಂದ ಆಘಾತಕ್ಕೊಳಗಾಗಿ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಅಚಾನಕ್ಕಾಗಿ ಬಂದೊದಗಿದ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದಾಗಿನಿಂದ ಗುಣಮುಖವಾಗುವವರೆಗೂ ಪಟ್ಟ ಸಂಕಟವನ್ನು ಅನುಭವಿಸಿದ ಮಾನಸಿಕ ಯಾತನೆ, ಆ ಕ್ಷಣಗಳ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ತಾವು ಬರೆದ 'ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ' ಎಂಬ ಪುಸ್ತಕದಲ್ಲಿ ಎಳೆ ಎಳೆಯಾಗಿ ದಾಖಲಿಸುತ್ತಾರೆ.

ಪುಸ್ತಕದ ಒಂದು ಅಧ್ಯಾಯದಲ್ಲಿ ಶ್ರುತಿಯವರು ಕೆಮೋ ಥೆರಪಿ ಚಿಕಿತ್ಸೆ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ. "ಕಿಮೋ ಥೆರಪಿ ಆರಂಭಿಸಿ ಮೂರು ನಾಲ್ಕು ದಿನ ಎನ್ನುವಷ್ಟರಲ್ಲಿ ನಾಳೆಗೆ ಪೂರ್ತಿ ಕರಗಿದಂತಾಗುತಿತ್ತು. ಡಾಕ್ಟರ್ ಸಿರಪ್ ಬರೆದುಕೊಟ್ಟದ್ದು ತೆಗೆದುಕೊಂಡರೂ ಅಷ್ಟೇ ತಿನ್ನಲು ಕಷ್ಟವಾಗುತಿತ್ತು. ಮಾತನಾಡಲು ಆಗುತ್ತಿರಲಿಲ್ಲ. ಸ್ವಲ್ಪ ಮಾತನಾಡಲು ಪ್ರಯತ್ನಿಸಿದರೂ ನಾಳಿಗೆ ವಸಡು, ಹಲ್ಲಿಗೆ ತಾಗಿ ಜೀವ ಹೊದಂತಾಗುತ್ತಿತ್ತು. ಹಾಗಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತಿದ್ದೆ.
ಎಷ್ಟೇ ಹಸಿವಾದರೂ ಹೆಚ್ಚು ತಿನ್ನಲಾಗುತ್ತಿರಲಿಲ್ಲ. ಕಷ್ಟಪಟ್ಟು ಒಂದು ಲೋಟ ರವೆಗಂಜಿ ಕುಡಿಯುತ್ತಿದೆ. ಅದೇ ನನಗೆ ಊಟವಾಗುತಿತ್ತು. ಆಗ ಜೀವನದಲ್ಲಿ ಮೊದಲ ಬಾರಿಗೆ ಹಸಿವು ಅಂದರೆ ಏನು ಅಂತಾ ತಿಳಿದದ್ದು. ಎಲ್ಲಾ ಇದ್ದು ತಿನ್ನಲಾಗದ ನನ್ನ ಪರಿಸ್ಥಿತಿ, ಯಾರಿಗಾದರೂ ಮೇಲ್ಕಂಡ ಮಾತುಗಳನ್ನು ಕೇಳಿದರೆ ಕರಳು ಚುರ್ ಅನ್ನದೆ ಇರದು.
ಹೀಗಿರುವಾಗ ಸ್ವತಃ ಸಂಕಷ್ಟ ಅನುಭವಿಸಿದ ಶ್ರುತಿಯವರ ಮನಸ್ಸಿನಲ್ಲಿ ಮೂಡುತಿದ್ದ ಭಾವನೆಗಳ ತಳಮಳಗಳು ಎಷ್ಟಿರಬಹುದು? ಸಾವು ಬದುಕಿನ ಬಗ್ಗೆ ಯೋಚಿಸುತ್ತ ಕಳೆದ ಭಯಾನಕ ದಿನಗಳು ಆ ಕ್ಷಣಗಳು ಎಷ್ಟಿರಬಹುದು? ಎನ್ನುವ ಇಲ್ಲಿ ತಿಳಿಯಿರಿ.
ತನಗೆ ಯಾರಾದರೂ ದಿನವೂ ಧೈರ್ಯ ತುಂಬಲಿ ಎಂದು ಹಪ ಹಪಿಸುವ ಕ್ಯಾನ್ಸರ್ ರೋಗಿಗಳ ಮಧ್ಯೆ ಚಿಕಿತ್ಸೆಯ ಸಂದರ್ಭದಲ್ಲಿ ತಾನು ಧೈರ್ಯ ತುಂಬಿಕೊಂಡು ತನ್ನವರಿಗೂ ಧೈರ್ಯ ತುಂಬಿದ ಶ್ರುತಿಯವರ ಸಕಾರಾತ್ಮಕ ಮನಸ್ಥಿತಿ ಮೆಚ್ಚುವಂತದ್ದು. ಕ್ಯಾನ್ಸರ್ ಗೆದ್ದು ಪಡೆದ ಮರುಜನ್ಮವನ್ನು ತನ್ನಂತೆ ಕ್ಯಾನ್ಸರ್‌ಗೆ ತುತ್ತಾಗಿ ನಿತ್ಯವೂ ಹೋರಾಡುತ್ತಿರುವ ಎಷ್ಟೋ ಜನರಿಗೆ ಆತ್ಮವಿಶ್ವಾಸ ತುಂಬುವ ಜೀವನೋತ್ಸಾಹ ಬೆಳೆಸುವ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.
ಸೂಕ್ಷ್ಮ ಸ್ವಭಾವದವರಾದ ಶ್ರುತಿಯವರು ಕ್ಯಾನ್ಸರ್ ಅನ್ನುವ ಮಹಾಮಾರಿ ಜೊತೆ ಹೋರಾಡಿ ಗಟ್ಟಿಗಿತ್ತಿ ಆಗಿ ಬದಲಾದ ಕಥೆ ಕ್ಯಾನ್ಸರ್ ಜೊತೆಗೆ ನಿತ್ಯವೂ ಹೋರಾಡುತ್ತಿರುವ ಎಷ್ಟೋ ಜನರಿಗೆ ಆತ್ಮವಿಶ್ವಾಸ ತುಂಬಲು ಜೀವನೋತ್ಸಾಹ ಬೆಳೆಸಲು ನೆರವಾಗೋದ್ರಲ್ಲಿ ಎರಡು ಮಾತಿಲ್ಲ.
ಇವರು ಬರೆದ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. "Osteosarcoma that changed my life" ಎಂಬ ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಅಂಕಣ ಬರಹಗಳ ಸಂಕಲನ "ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ" ಹಾಗೂ 'ಕರ್ತೃ' ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಹೆಲೆನ್ ಕೆಲ್ಲೆರ್ ಜೀವನಚರಿತ್ರೆಯನ್ನು "ಹೆಲೆನ್ ಕೆಲ್ಲೆರ್-ನನ್ನ ಬದುಕಿನ ಕಥೆ" ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು ಭಾಷಾ ಭಾರತೀ ಪ್ರಾಧಿಕಾರದ ಬಹುಮಾನಕ್ಕೆ ಈ ಕೃತಿಯು ಭಾಜನವಾಗಿದೆ.












Click it and Unblock the Notifications