ಬಿಜೆಪಿ, ಕಾಂಗ್ರೆಸ್ ನತ್ತ ಬೇಳೂರು ಗೋಪಾಲಕೃಷ್ಣ ಚಿತ್ತ!

ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಬೇಳೂರು ಗೋಪಾಲಕೃಷ್ಣ, ಸಾಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸದ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೊರಟಿರುವ ಅವರು, ಜೆಡಿಎಸ್ ತೊರೆದು ಬಿಜೆಪಿ ಅಥವ ಕಾಂಗ್ರೆಸ್ ಸೇರಲು ಬಯಸಿದ್ದಾರೆ.
ಬಹುತೇಕ ಮುಂದಿನ ವಾರಾಂತ್ಯದ ವೇಳೆಗೆ ಬೇಳೂರು ಜೆಡಿಎಸ್‌ಗೆ ರಾಜೀನಾಮೆ ನೀಡಲು ಉದ್ದೇಶಿಸಿದ್ದು, ಕಾಂಗ್ರೆಸ್ ಅಥವಾ ಬಿಜೆಪಿಯ ಮುಖಂಡರೊಂದಿಗೆ ಮಾತುಕತೆ ನಡೆದಿದೆ ಎಂದು ಅವರ ಬೆಂಬಲಲಿಗರು ಹೇಳಿದ್ದಾರೆ. ಸಮಾಜವಾದಿ ಪಕ್ಷದಿಂದ ಬೇಳೂರು ಅವರಿಗೆ ಆಹ್ವಾನ ಬಂದಿದ್ದು, ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆಯೂ ದೊರಕಿದೆ. (ಸೈಕಲ್ ಸವಾರಿಗೆ ಸಜ್ಜಾದ್ರು ಬೇಳೂರು)
ಆದರೆ, ಸಮಾಜವಾದಿ ಪಕ್ಷಕ್ಕೆ ರಾಜ್ಯದಲ್ಲಿ ಅಂತಹ ಪ್ರಭಾವವಿಲ್ಲ. ಆದ್ದರಿಂದ ಮಾತೃ ಪಕ್ಷ ಬಿಜೆಪಿ ಅಥವ ಕಾಂಗ್ರೆಸ್ ಸೇರಬೇಕು ಎಂದು ಬೇಳೂರು ಚಿಂತನೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ಸೇರಲು ಬೇಳೂರು ಪ್ರಯತ್ನ ನಡೆಸಿದ್ದರು. ಆದರೆ, ಅವರ ರಾಜಕೀಯ ಕಡುವೈರಿ ಕಾಗೋಡು ತಿಮ್ಮಪ್ಪ ಅವರು ಬೇಳೂರು ಪ್ರಯತ್ನಕ್ಕೆ ನೀರು ಸುರಿದು. ಕಾಂಗ್ರೆಸ್ ಸೇರದಂತೆ ತಡೆದಿದ್ದರು.
ಪಕ್ಷಾಂತರ ವೇಕೆ : ಬೇಳೂರು ಗೋಪಾಲಕೃಷ್ಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಟಿಕೆಟ್ ಬಯಸಿದ್ದರು. ಆದರೆ, ಜೆಡಿಎಸ್ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಪ್ರಯತ್ನವನ್ನು ನಡೆಸುತ್ತಿದೆ. ಇದರಿಂದಾಗಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಅವರು ಪಕ್ಷ ತೊರೆಯುವ ಆಲೋಚನೆ ನಡೆಸಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿಗೆ ವಲಸೆ ಹೋದರೂ ಲೋಕಸಭೆ ಚುನಾವಣೆ ಟಿಕೆಟ್ ಬೇಳೂರು ಅವರಿಗೆ ಸಿಗುವುದು ಅಷ್ಟು ಸುಲಭವಾಗಿಲ್ಲ. ಅದರಲ್ಲೂ ಶಿವಮೊಗ್ಗ ಬಿಜೆಪಿಯ ಪ್ರಬಲ ನಾಯಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಬೇಳೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದ್ದರಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ.
ಇನ್ನೂ ಕಾಂಗ್ರೆಸ್ ಸೇರಲು ಕಾಗೋಡು ತಿಮ್ಮಪ್ಪ ಅವರ ಒಪ್ಪಿಗೆ ಅಗತ್ಯವಾಗಿದೆ. ಕಾಂಗ್ರೆಸ್ ಕೈ ಹಿಡಿದರೂ ಲೋಕಸಭೆ ಚುನಾವಣೆಯ ಟಿಕೆಟ್ ದೊರೆಯುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ರಾಜಕೀಯ ಭವಿಷ್ಯ ಅರಸುತ್ತಾ ಮತ್ತೊಮ್ಮೆ ಬೇಳೂರು ಗೋಪಾಲಕೃಷ್ಣ ಪಕ್ಷಾಂತರ ಮಾಡಲು ಸಿದ್ಧವಾಗಿರುವುದಂತೂ ಸತ್ಯ.











Click it and Unblock the Notifications