ತಣ್ಣಗಾಗದ ಒಳಮೀಸಲಾತಿ ಕಿಚ್ಚು, ಮತ್ತೆ ರಸ್ತೆಗಿಳಿದ ಕುಂಚೇನಹಳ್ಳಿ ತಾಂಡದ ಬಂಜಾರ ಸಮುದಾಯ
ಶಿವಮೊಗ್ಗ, ಮಾರ್ಚ್, 28: ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದ ಮೇಲೆ ನಿನ್ನೆ ಬಂಜಾರ ಸಮುದಾಯದವರು ದಾಳಿ ಮಾಡಿದ್ದರು. ಒಳಮೀಸಲಾತಿ ಹಂಚಿಕೆ ವಿಚಾರವಾಗಿ ನಡೆದಿರುವ ಈ ಪ್ರತಿಭಟನೆ ಹಿಂಸಾಚಾರ ರೂಪಕ್ಕೂ ತಿರುಗಿದ್ದು, ಈ ವೇಳೆ ಬಿಎಸ್‌ವೈ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಮತ್ತೆ ಇದೀಗ ಶಿವಮೊಗ್ಗ ಜಿಲ್ಲೆಯ ಕುಂಚೇನಹಳ್ಳಿ ತಾಂಡದ ರಸ್ತೆಯಲ್ಲಿಯೂ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳ ಮೀಸಲಾತಿ ಕಿಚ್ಚು
ಒಳ ಮೀಸಲಾತಿ ಜಾರಿ ಸಂಬಂಧ ರಾಜ್ಯ ಸರ್ಕಾರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಆಕ್ರೋಶಗೊಂಡ ಸಮುದಾಯದವರು ಶಿವಮೊಗ್ಗ ಜಿಲ್ಲೆಯ ಕೊಂಚೇನಹಳ್ಳಿ ತಾಂಡದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಸರ್ಕಾರದ ವಿರುದ್ಧ ಆಕ್ರೋಶ
ಕುಂಚೇನಹಳ್ಳಿ ಗ್ರಾಮಸ್ಥರು ರಸ್ತೆ ಮೇಲೆ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಿವಮೊಗ್ಗ-ಶಿಕಾರಿಪುರ ಹೆದ್ದಾರಿಯಲ್ಲಿರುವ ಕುಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇಲ್ಲಿನ ಬಂಜಾರ ಸಮುದಾಯದವರು ದಿಢೀರ್ ರಸ್ತೆಗಿಳಿಯುವ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ- ಶಿಕಾರಿಪುರ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಹಾಗೆಯೇ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ನಿಂಯತ್ರಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ.
ಎಸ್‌ಸಿ ಮೀಸಲಾತಿ ಮರು ಹಂಚಿಕೆ ವಿಚಾರವಾಗಿ ಬಸವರಾಜ ಬೊಮ್ಮಾಯಿ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಿವಿಧ ಸಮುದಾಯಗಳು ಬೀದಿಗಿಳಿದಿವೆ. ಹಾಗೆಯೇ ಮಂಗಳವಾರ ಬಾಗಲಕೋಟೆ ಜಿಲ್ಲೆಯಲ್ಲಿ ಲಂಬಾಣಿ ಸಮುದಾಯದವರು ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ರಾಜ್ಯ ಸರಕಾರ ಘೋಷಿಸಿರುವ ಒಳಮೀಸಲಾತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಲಂಬಾಣಿ ತಾಂಡಾಗಳಿಗೆ ಬಿಜೆಪಿ ಮುಖಂಡರ ಪ್ರವೇಶ ನಿಷೇಧಿಸಿ ಸಮುದಾಯದವರು ಭಿತ್ತಿಪತ್ರಗಳನ್ನು ಹಾಕಿದರು.
ತಾಂಡಾಗಳಲ್ಲಿನ ಹಲವು ಮನೆಗಳ ಮೇಲೆ ಹಾರಿಸಿದ್ದ ಬಿಜೆಪಿ ಧ್ವಜಗಳನ್ನು ಲಂಬಾಣಿ ಸಮುದಾಯದವರು ತೆಗೆದು ಎಸೆದರು. ಸಮುದಾಯದವರು ಕೇಸರಿ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶೇ.17 ಮೀಸಲಾತಿಯನ್ನು ವಿವಿಧ ಸಮುದಾಯಗಳಿಗೆ ಹಂಚುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ. ರಾಜ್ಯವು ಎಸ್‌ಸಿ ( ಎಡ ) ಶೇ 6, ಎಸ್‌ಸಿ ( ಬಲ ) ಶೇ 5.5, ಎಸ್‌ಸಿ ( ಸ್ಪೃಶ್ಯ ) ಶೇ 4.5, ಮತ್ತು ಎಸ್‌ಸಿ ( ಇತರರು ) ಶೇ 1 ಮೀಸಲಾತಿಯನ್ನು ಶಿಫಾರಸು ಮಾಡಿದೆ.
ಸೋಮವಾರ ಸಂಜೆ ಶಿಕಾರಿಪುರದಲ್ಲಿ ಬಂಜಾರ ಮತ್ತು ಭೋವಿ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಚೇರಿ ಮತ್ತು ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಕೊನೆಗೆ ಶಿವಮೊಗ್ಗ ಜಿಲ್ಲಾಡಳಿತವೂ ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಿತ್ತು.












Click it and Unblock the Notifications